ಹೆಪ್ಪುಗಟ್ಟಿದ ಮೌನ….?
ಮೊನ್ನೆ ತಾನೆ ಕುಂಟಾ
ಬಿಲ್ಲೆಯಾಡಿದವಳು
ದಿಢೀರನೆ ಮೂಲೆ ಸೇರಿ
ಅಪರಾಧಿಯೋ
ನಿರಪರಾಧಿಯೋ
ಯಾವುದೂ ಗೊತ್ತಿಲ್ಲದೆ
ಬಿಳಿಬಿಳಿ ಕಣ್ಣು ಬಿಟ್ಟಾಗ
ಮುಗ್ದ ಮುಖದಲಿ ಮೌನ
ಹೆಪ್ಪುಗಟ್ಟಿತು
ಮಗಳ ಮುಖ ನೋಡಿ
ದಿಗಿಲುಗೊಂಡಳು ಅಮ್ಮ
ಮನದ ಕದತಟ್ಟಿದಾಗ
ಸತ್ಯ ಗೊತ್ತಾಗಿ ಎದೆ
ಬಡಿದುಕೊಂಡಳು
ನಾಲ್ಕು ಗೋಡೆ ಮಧ್ಯ
ಯಾರಿಗೂ ಕೇಳಿಸದಂತೆ
ವಿಷಯ ವಿಸ್ತರಿಸುವ
ಹಾಗಿಲ್ಲ ಒಳ ಹೊರಗೂ
ಮರ್ಯಾದೆಗೇಡು
ಮುಚ್ಚಿಟ್ಟರೆ ಆತ್ಮವಂಚನೆ
ಬಿಚ್ಚಿಟ್ಟರೆ ಮಾನ ಹರಾಜು
ದ್ವಂದ್ವ ಗೊಂದಲದ
ಗೂಡಾಯಿತು ಮನ
ದಿನ ಉರುಳಿದವು
ತರಗೆಲೆಗಳಂತೆ
ಮುಚ್ಚಿಟ್ಟರೇನು
ಬಿಚ್ಚಿಟ್ಟರೇನು
ಹೆಪ್ಪಿಟ್ಟ ಹಾಲು ಮೊಸರಾಗಿ
ಅವಳ ಕೈಬಳೆ
ವಂಚಕನ ಕೈಕೊಳವಾಗಿ
ಬದಲಾದವು,,!

-ಶರಣಗೌಡ ಬಿ.ಪಾಟೀಲ ತಿಳಗೂಳ, ಗುಲ್ಬರ್ಗಾ ಜಿ.
