ಬೆಂಗಳೂರು, ಸೆ.8: ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ತುಮಕೂರು ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಬಿ. ರಮೇಶ್ ಅವರು ನೇಮಕವಾಗಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ಡಾ. ರಮೇಶ್ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಬೆಂಗಳೂರು ನಗರ ವಿವಿಯ ಕುಲಪತಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಅಭಿನಂದನೆ: ಬೆಂಗಳೂರು ನಗರ ವಿವಿಯ ಕುಲಪತಿಗಳಾಗಿ ನೇಮಕವಾಗಿರುವ ಪ್ರೊ. ರಮೇಶ್ ಅವರನ್ನು ಬೆಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಬಿ. ಶಿವಣ್ಣ, ಗುಲ್ಬರ್ಗಾ ವಿವಿಯ ಮಾಜಿ ಸೆನೆಟ್ ಸದಸ್ಯ ಸಿ.ಮಂಜುನಾಥ್, ಚನ್ನಪಟ್ಟಣದ ಯುವ ಮುಖಂಡ ಪ್ರದೀಪ್ ಅಪ್ಪಗೆರೆ, ಬಳ್ಳಾರಿ ವಿಎಸ್ಕೆ ವಿವಿಯ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರ ಪ್ರಸಾದ್ ಮತ್ತಿತರ ಮುಖಂಡರು ಅಭಿನಂದಿಸಿದ್ದಾರೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಪ್ರೊ.ರಮೇಶ್ ಅವರು ನೇಮಕ ವಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಪ್ರದೀಪ್ ಅಪ್ಪಗೆರೆ ಅವರು, ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ರಮೇಶ್ ಅವರಿಗಿರುವ ಅಪಾರ ಅನುಭವ, ಜೀವನ ಪ್ರೀತಿ, ದೂರದೃಷ್ಟಿ ಒಳನೋಟಗಳ ಜೊತೆಗೆ ಇವರ ಸಮಾಜ ಸೇವಾ ತುಡಿತ ಸಾಮಾಜಿಕ ಪರಿವರ್ತನೆಯ ಬದ್ಧತೆಯಿಂದ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಹೊಸ ಭಾಷ್ಯ ಬರೆಯಲಾಗುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ