ಅನುದಿನ ಕವನ-೧೭೩೭, ಕವಿ: ಶರಣಗೌಡ ಬಿ.ಪಾಟೀಲ ತಿಳಗೂಳ, ಕಲಬುರಗಿ, ಕವನದ ಶೀರ್ಷಿಕೆ: ಗಾಂಧಿ ಗಿಡದ ಹೂಗಳು…!

ಗಾಂಧಿ ಗಿಡದ ಹೂಗಳು…!

ಅಂದು ಗಾಂಧೀ ನೆಟ್ಟ
ಗಿಡದ ಹೂಗಳು ಇಂದು,
ಎಂದೆದಿಗೂ ಅರಳಿ
ಪರಿಮಳದ ಕಂಪು
ಸೂಸುತ್ತಿವೆ

ಚಳುವಳಿಯ ಗೀತೆ
ಹಾಡಿ ಹೋರಾಟದ
ದಶ ದಿಕ್ಕು ವರ್ಣಿಸಿ
ಭವಿಷ್ಯದೆಡೆಗೆ
ಬೆಳಕು ಚಲ್ಲುತ್ತಿವೆ

ಗುಲಾಮಗಿರಿಗೆ ಸೆಡ್ಡು
ಹೊಡೆದು,ಮಣ್ಣಲ್ಲಿ
ಮಣ್ಣಾಗಿ ಹೋದವರಿಗೆ
ಪುನಃ ಸ್ಮರಿಸುತ್ತಿವೆ

ಸುಖ, ಭೋಗ ,ಹಸಿವು
ನಿದ್ದೆ ನೀರಡಿಕೆ ಮನೆ
ಸಂಸಾರ ತೊರೆದವರ
ಸಾಹಸ ಗಾಥೆ ನಿರಂತರ
ವರ್ಣಿಸುತ್ತಿವೆ

ಮಹಾತ್ಮನ ಕೋಲು,
ಶಾಲು, ಚರಕ ಕನ್ನಡಕ,
ಸತ್ಯ ಶಾಂತಿ ಅಹಿಂಸೆಯ
ಮಹತ್ವ ಕಣ್ಮುಂದೆ ತರುತ್ತಿವೆ

ಸೇವೆ , ಸಹಕಾರ ಮಾನವೀಯ
ಮೌಲ್ಯ ಮೇಳೈಸಿಕೊಳ್ಳಲು
ಸಲಹೆ ಸೂಚನೆಯೂ
ನೀಡುತ್ತಿವೆ,,!


-ಶರಣಗೌಡ ಬಿ.ಪಾಟೀಲ ತಿಳಗೂಳ, ಕಲಬುರಗಿ