ಅನುದಿನ ಕವನ-೧೭೪೩, ಕವಿ: ಎಮ್ಮಾರ್ಕೆ, ಕಾವ್ಯ ಪ್ರಕಾರ: ಗಜಲ್

ಗಜಲ್

ಈ ಮನುಷ್ಯನೀಗ ಮೌಲ್ಯಗಳ ಮರೆತಿದ್ದಾನೆ
ಬೆಸೆಯಬೇಕಿರುವ ಬಂಧಗಳ ಮರೆತಿದ್ದಾನೆ

ರೀತಿ ರಿವಾಜುಗಳು ಗಂಟುಮೂಟೆಯಲ್ಲಿವೆ
ನಿಯತ್ತು,ನಿಯಮ ನೀತಿಗಳ ಮರೆತಿದ್ದಾನೆ

ಸ್ವಾರ್ಥದ ತೀರ್ಥಕೆ ಒಡ್ಡುವ ಕೈ ಹೆಚ್ಚಾಗಿವೆ
ದಾನವತ್ವದಿ ದಾನ ಧರ್ಮಗಳ ಮರೆತಿದ್ದಾನೆ

ಕಾಯಕದಲ್ಲಿಯೇ ಕೈಲಾಸವ ಕಾಣಬೇಕಿದೆ
ಗೊತ್ತಿದ್ದರೂ ಗೈದ ಕರ್ಮಗಳ ಮರೆತಿದ್ದಾನೆ

ಕುಂಬಾರ ಕತ್ತಲೆಗೆ ಹಣತೆಯ ಹಚ್ಚಿಟ್ಟಿದ್ದಾನೆ
ದೀಪವೇ ಹೊತ್ತಿಸಿದ ಕಿಡಿಗಳ ಮರೆತಿದ್ದಾನೆ

-ಎಮ್ಮಾರ್ಕೆ