ಅರಳದ ಬದುಕು
ಕರುಳ ಬಳ್ಳಿಗೆ ಬೆಂಕಿ ಇಟ್ಟು
ಹೊಟ್ಟೆ ಕಿಚ್ಚಿಗೆ ಒದ್ದೆ ಬಟ್ಟೆ ಹಾಕಿ
ಬೋರಲು ಬಿದ್ದಿವೆ ಅಮಾಯಕ ಬದಕುಗಳು
ಕಣ್ಣಲ್ಲಿ
ಭವಿಷ್ಯ ಕರಗಿ ದಿಟ್ಟಿ ಮಸುಕಾಗಿದೆ
ಬೆಳಗಬೇಕಿದ್ದ ಮಿಣುಕು ಬೆಳಕಿಂದು
ಮಣ್ಣಾಗಲು ಇನ್ನೆಲ್ಲಿಯ ಬೆಳಕು.
ಬೇಲಿ ಎದ್ದು ಹೊಲ ಮೆಯ್ಯಲು
ದೂರುವುದದಾರಿಗೆ,
ಬದುಕು
ಒಡ್ಡಿದ ಪರೀಕ್ಷೆಯಲಿ ಬರೀ
ಶೂನ್ಯವೇ ಫಲವಾದಾಗ, ಶೂನ್ಯದತ್ತ ದಿಟ್ಡಿ ನೆಟ್ಟು ರೋಧಿಸುತ್ತಿವೆ ಭವಿಷ್ಯ ಸತ್ತ ಹೊತ್ತಿನಲಿ
ಮತಿಗೆಟ್ಟ ಮತಕ್ಕೆ ಜೋತು ಬಿದ್ದು
ಜಾತಿ ಕಂದಕ ಸೃಜಿಸಿ ಲಂಡ ಗುಲಾಮತನಕ್ಕೆ
ಬದುಕೊಡ್ಡಿ ಹರೆಯಕೆ ಬಲಿಪೀಠ ಅಣಿಗೊಳಿಸಿದ ಘಳಿಗೆಯಲಿ
ಶಾಂತಿ ಮಂತ್ರದ ಗೀಳಾಟ
“ಮನೆಶಾಂತಿ ಮನೆ ಬಿಟ್ಟರೆ ಅದರಿವರ ಮನೆಯಿಂದ ಎರವಲು ತರಲೇನದು ವಸ್ತುವೆ?” ಎಂದನೋರ್ವ ಕವಿವರ್ಯ
ಈವತ್ತಿಗೆ ಶಾಂತಿ ನಿಜಕ್ಕೂ ಕಾಲ್ಕಿತ್ತು ಮಸಣ ಸೇರಿದ್ದಾಳೆ
ಆಲಂಗಿಸುವ ಕೈಗಳು ಕಬಂಧವಾಗಿ,
ಬೆಚ್ಚಗೆ ಕಾಪಿಡುವ ಮಡಿಲು ಕಾಮದ
ವಾಸನೆ ಬೀರಿ, ಪಾಪ ಕೂಪಕ್ಕೆ ತಳ್ಳುತ್ತಿರೆ ಇನ್ನೆಲ್ಲಿ ಭವಿಷ್ಯ?
ಭವಿಷ್ಯ ಸತ್ತಿದೆ!
ಆದರೂ ಭವಿಷ್ಯದ ಶಾಂತಿ
ಕಾಯಲು ಸತ್ತ ಕೈ ಜೋಡಿಸಬೇಕಿದೆ

-ಭಾರತಿ ಅಶೋಕ್, ಹೊಸಪೇಟೆ (2022 ರಲ್ಲಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆದ ‘ವಿಶ್ವ ಶಾಂತಿಗಾಗಿ ಕಾವ್ಯ’ ಕುರಿತ ಕವಿಗೋಷ್ಟಿಯಲ್ಲಿ ವಾಚಿಸಿದ ಕವಿತೆ)
