ದೀಪಾವಳಿ ಎಂದರೆ ನನಗೆ….
ದೀಪಾವಳಿ ಎಂದರೆ ನನಗೆ
ತಿಂಗಳಿಗೂ ಮೊದಲೆ
ಉದ್ದನೆಯ ಇಪ್ಪ ನೇರಳೆ,
ತೊಗರಿ ಕಡ್ಡಿಗಳ ಆರಿಸಿ ತಂದು
ಹದವಾಗಿ ಕಟ್ಟಿ ಒಣಗಳೆಂದು
ಗರಿಮನೆಯ ಮೇಲೆ ಅಪ್ಪ ಇಡುತಿದ್ದ
ಪಂಜುಗಳ ಎಣಿಸೆನಿಸಿ
ಇದು ನನಗೆ ಇದು ನಿನಗೆ
ಎಂದು ಮೀಸಲಿರಿಸುತಿದ್ದ ನೆನಪು
ದೀಪಾವಳಿ ಎಂದರೆ ನನಗೆ
ಸಂಜೆ ಶಾಲೆಯಿಂದ
ಮನೆಗೆ ಬರುವಾಗ
ಅಂಗಡಿಯ ಮುಂದೆ
ಕಣ್ಕುಕ್ಕುವಂತೆ ಇಡುತಿದ್ದ
ಪಿಸ್ತೂಲು, ಲಕ್ಷ್ಮಿ ಪಟಾಕಿಗಳು
ಕಾಣದಾಗುವವರೆಗೂ
ಕೈಸೇರಿದ ಕಾಸೆಲ್ಲ
ತಿಂಡಿ ತಿನಿಸುಗಳ ಮರೆತ ನೆನಪು
ದೀಪಾವಳಿ ಎಂದರೆ ನನಗೆ
ಪಟಾಕಿ ಸದ್ದಿಗೆ
ಕೊಟ್ಟಿಗೆ ದನ ಬೆದರಿದ್ದಕ್ಕೊ
ಹಟ್ಟಿಯಲ್ಲಿ ಕೂಸು ಎದರಿದ್ದಕ್ಕೊ
ಹಚ್ಚಿದ ರಾಕೆಟು ಮೇಲಕ್ಕೆರದೆ
ಪಕ್ಕದ ಮನೆಯ ಹುಲ್ಲಿನ ಮೇದೆಗೊ
ಇದಿರು ಮನೆಯ ಸೂರಿನ ಗರಿಗೊ
ತಗುಲಿ ಹತ್ತಿದ ಬೆಂಕಿ ವರ್ಷಗಟ್ಟಲೆ
ಆರದ ಜಗಳವಾದ ನೆನಪು
ದೀಪಾವಳಿ ಎಂದರೆ ನನಗೆ
ಹಬ್ಬದ ಮಾರನೆಯ ಮುಂಜಾನೆ
ಹಾಲು ತರಲು ಹೋದಾಗ
ಅವರಿವರ ಮನೆಯ ಮುಂದೆ
ಅರ್ಧಕ್ಕೆ ಉರಿದುನಿಂತು
ಹೊಡೆಯದೆ ಠುಸ್ಸ್ ಎಂದು
ಮಂಜಿನ ಹನಿಗೆ ಮೆತ್ತಗಾದ
ಪಟಾಕಿಗಳ ತಂದು ಒಣಗಿಸಿ
ಮದ್ದುದುರಿಸಿ ಸುಟ್ಟ ನೆನಪು
ದೀಪಾವಳಿ ಎಂದರೆ ನನಗೆ
ನಮ್ಮ ಕುಚೇಷ್ಟೆಗೆ
ಬೆದರಿ ದಿಕ್ಕಾಪಾಲಾಗಿ
ಓಡಿದ ನಾಯಿಯ ಜೋತೆಗೆ
ಸಿಗಿದ ಮರದ ಕೊಂಬೆ,
ಹೊಡೆದೊದ ನಲ್ಲಿ ಪೈಪು,
ಪ್ಲಾಸ್ಟಿಕ್ ಬಿಂದಿಗೆ, ಎಣ್ಣೆ ಬಾಟಲಿ
ಯಾರದ್ದೋ ಹೊಣಿಯ
ಮಡಕೆ ಚೊರಾಗಿ ಬೈಸಿ ಕೊಂಡ ನೆನಪು
ದೀಪಾವಳಿ ಎಂದರೆ ನನಗೆ
ಕಾರ್ತಿಕ ಸೋಮವಾರದಂದು
ನಮ್ಮೂರ ಮಾರಿಗುಡಿ ಯಲ್ಲಿ
ಬಿದಿರಿನ ಏಣಿಗಳ ಕಟ್ಟಿ
ಸಗಣಿ ಉಂಡೆಗಳ ಮೇಲೆ
ಸಾಲು ಮಣ್ ದೀಪಗಳ ಬೆಳಕಲ್ಲಿ
ಜಲ್ಲೆನಿಸುವ ತಮಟೆಯ ಸದ್ದಿನಲ್ಲೂ
ತೂಗಡಿ ಕಾಯುತಿದ್ದ
ಕಾಯಿ ಬೆಲ್ಲ ಬೆರಸಿದ ಕಡಲೆ ಪುರಿ ನೆನಪು
ದೀಪಾವಳಿ ಎಂದರೆ ನನಗೆ
ತಂಗಿಯ ಜೊತೆಗೆ
ಕಿತ್ತಾಡಿಕೊಂಡು ಹಚ್ಚಿದ ಮಾತಾಪು
ಹತ್ತಿಲ್ಲವೆಂದು ಹತ್ತಿರ ಹೋದಾಗ
ಸಿಡಿದು ಕಿವಿಯ ಗುಯ್ ಗುಟ್ಟಿಸಿದ
ಆಟಾಮ್ ಬಾಂಬ್,
ಕಸದೊಳಗೆ ಸುಮ್ಮನಿದ್ದು
ಬೆಂಕಿ ಕಾಯುವಾಗ ಸಿಡಿದು
ಅಂಗಿಸುಟ್ಟ ಆನೆಪಟಾಕಿಗಳ ನೆನಪು…
ದೀಪಾವಳಿ ಎಂದರೆ ನನಗೆ
ಅವ್ವ ಹೊಸ್ತಿಲಿಗೆ ಹಚ್ಚಿದ
ಎಣ್ಣೆ ದೀಪ ಗಾಳಿಗೆ ಆರದಂತೆ
ನೋಡಿಕೊಳ್ಳಳೋಗಿ
ದೀಪ ಬೀಳಿಸಿ,
ಮನೆಯವರೊಟ್ಟಿಗೆ ಕೂರುವ
ಪಾಯಸದೂಟಕೆ
ಕೈ ತೊಳೆಯದೆ ಕೂತಾಗ ಎಲ್ಲರೆದುರು
ಅಪ್ಪ ಗದರಿದಕ್ಕೆ ಸಪ್ಪೆಯನಿಸಿದ ನೆನಪು
ದೀಪಾವಳಿ ಎಂದರೆ ನನಗೆ
ಪಕ್ಕದ ಮನೆಯ
ಲ್ಯಾಂಡ್ ಲೈನ್ ಫೋನ್ ಕಿರುಚಿ
ದೊಡ್ದಮ್ಮನಿಗಿದ್ದೊಬ್ಬ
ಪ್ರಾಯದ ಗಂಡು ಮಗ
ಗೆಳೆಯರೊಟ್ಟಿಗೆ ಈಜಲೋಗಿ ಸತ್ತ
ವಿಷ ಸುದ್ದಿಯು ಎದೆಯೊಳಗೆ
ಸಿಡಿದುರಿದು ಕತ್ತಲಾಗಿ
ಬದುಕಿನಲಿ ಪಟಾಕಿಯ ಸದ್ದಡಗಿಸಿದ ನೆನಪು…

-ಸುಧನ್ ಹೊಸೂರು(ಮಧುಸೂದನ ಹೊಸೂರು), ಮೈಸೂರು
