ಅನುದಿನ ಕವನ-೧೭೫೮, ಹಿರಿಯ ಕವಿ: ಡಾ. ಪ್ರಕಾಶ‌ ಖಾಡೆ, ಬಾಗಲಕೋಟೆ

ನನಗೆ ನದಿಯಾಗಬೇಕಿನಿಸಿತು
ಗುಡ್ಡಗವ್ವರ ನೋಡಿ ಬದಿಗೆ ಸರಿದೆ.

ನನಗೆ ಬೆಟ್ಟವಾಗಬೇಕೆನಿಸಿತು
ನಿಂತಲ್ಲೇ ನಿಂತ ಪರಿಯ ಕಂಡು ಬೇಡವೆನಿಸಿತು.

ನನಗೆ ಸಾಗರವಾಗಬೇಕೆನಿಸಿತು
ಉಪ್ಪು ನೀರಾಗುವ ಏಕ ರುಚಿ ಹಿಡಿಸದಾಯಿತು.

ಏನೂ ಬೇಡವೆಂದು
ಮನುಷ್ಯನಾಗಬೇಕೆಂದಿದ್ದೇನೆ

ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆ
ಮುಖಾಮುಖಿಯಾಗಿದ್ದೇನೆ.

– ಡಾ. ಪ್ರಕಾಶ ಖಾಡೆ, ಬಾಗಲಕೋಟೆ