ಅನುದಿನ‌ ಕವನ-೧೭೬೧, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ: ಕವಲು ದಾರಿಯಲಿ ನಿಂತು..

ಕವಲು ದಾರಿಯಲಿ ನಿಂತು..

ಹೆಜ್ಜೆಗೊಂದು ಸಿಹಿ ಕಹಿ ನೆನಪ ಮನದಿ ಹೊತ್ತು
ನಡೆದವಲ್ಲ ದಾರಿ ಸವೆದಂತೆ ಬಹಳ ಹೊತ್ತು
ಗೊತ್ತು ಗುರಿ ಇದ್ದೂ ಇಲ್ಲದಂತೆ ಕಾಲ ಉರುಳಿದಂತೆ
ಕವಲು ದಾರಿಯ ಸಂದಿಗ್ಧತೆಗೆ ನಿಂತುಬಿಟ್ಟೆವಲ್ಲ…

ಬಾಳದಾರಿ ನಡುವೆ ಮೆರೆದ ಮಾತು ಮರೆಯಿತೇಕೆ
ವಿರಹದುರಿಗೆ ತಬ್ಬಿದ ಮೌನ ಜೊತೆಯಾಯಿತೇಕೆ
ನಡೆವ ದಾರಿ ಹರಡಿದೆ ನಡೆದಷ್ಟು ದೂರ ತಣ್ಣಗೆ
ಅಹಮ್ಮಿನ ನೋಟದಿ ಕಣ್ಣಿದ್ದೂ ಕುರುಡಾಗಿಬಿಟ್ಟೆವಲ್ಲ..

ಕನಸು ಬಿಡಿಸಿದ ಚಿತ್ತಾರಕೆ ಜೊತೆಯಲಿ ಬಣ್ಣ ಬಳಿದು
ಮನಸು ಕಟ್ಟಿದರಮನೆಯಲಿ ಜೊತೆಯಾಗಿ ಉಳಿದು
ಎಲ್ಲ ತೊರೆದು ಹೊರೆಟೆವಲ್ಲ ದಾರಿಯೆರೆಡು ತುಳಿದು
ಒಲವ ಹೊದಿಕೆ ಕಳಚಿ ಬೆತ್ತಲಾಗಿ ಮತ್ತೆ ಒಂಟಿಯಾದೆವಲ್ಲ..


-ಎಂ.ಆರ್. ಸತೀಶ್.. ಕೋಲಾರ