ಧಾರವಾಡ, ಅ.26 : ಆಧುನಿಕ ಕಾಲದ ಇಂದಿನ ದಿನಮಾನದಲ್ಲಿ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಹೆಚ್ಚಾದಂತೆ ಸಾಮಾಜಿಕ ಅನಿಷ್ಟ ಆಚರಣೆಗಳಾದ ಜಾತೀಯತೆ, ಅತಿಯಾದ ಧಾರ್ಮಿಕತೆ, ಸ್ವಾರ್ಥ ಹೆಚ್ಚಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಮಾಜಿ ಸಹಕಾರ ಸಚಿವ ಎಸ್.ಎಸ್.ಪಾಟೀಲ ಅವರು ವಿಷಾಧಿಸಿದರು.
ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾಹದೇಶಪಾಂಡೆ ಸಭಾಭವನದಲ್ಲಿ ಗಣಕರಂಗ ಮತ್ತು ವಚನಮಂದಾರ ಸಾಹಿತ್ಯ ಪೌಂಡೇಶನ್ ಸಂಯುಕ್ತವಾಗಿ ಆಯೋಜಿಸಿದ್ದ ಬುದ್ಧ-ಬಸವ-ಬಾಬಾಸಾಹೇಬರು ತ್ರಿಬಿ ಲೇಖನಗಳ ಸಂಕಲನ ಲೋಕಾರ್ಪಣೆ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ರಂಗಗಳಲ್ಲಿಯೂ ಮುಂದುವರೆಯುತ್ತಿರುವ ಈ ನಮ್ಮ ದೇಶವು ಜ್ಞಾನ-ವಿಜ್ಞಾನದೊಂದಿಗೆ ಸಾಮಾಜಿಕವಾಗಿಯೂ ಮುಂದುವರೆಯಬೇಕಾಗಿತ್ತು. ಆದರೆ ಸಮಾಜಕ್ಕೆ ಬೇಡವಾದ ಅಮಾನವೀಯ ಸಂಗತಿಗಳನ್ನು ತನ್ನೊಳಗಿಟ್ಟುಕೊಂಡು ಪೋಷಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಇಂಥಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಬುದ್ಧ-ಬಸವ-ಬಾಬಾಸಾಹೇಬರು ಆಯಾ ಕಾಲಘಟ್ಟದಲ್ಲಿ ಜಾಗೃತಿ ಮೂಡಿಸಿರುವುದನ್ನು ಇಂಥಹ ಕೃತಿಗಳ ಮೂಲಕ ಮರುನೆನಪಿಸಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವಚನಮಂದಾರ ಸಾಹಿತ್ಯ ಪೌಂಡೇಶನ್ ಅಧ್ಯಕ್ಷ ಡಾ.ವಿಜಯಕುಮಾರ ಕಮ್ಮಾರ ಅವರು, ಕೆಲವೊಂದು ಹಿತಾಸಕ್ತಿಗಳು ಇಂದಿನ ಸಮಾಜವನ್ನು ವ್ಯವಸ್ಥಿತವಾಗಿ ಎಲ್ಲಾ ರೀತಿಯಿಂದ ಕಲುಷಿತಗೊಳಿಸುತ್ತಿವೆ. ಅದಕ್ಕೆ ಪ್ರತಿರೋಧಕ ಶಕ್ತಿಯ ಚುಚ್ಚುಮದ್ದುಗಳಂತೆ ಬುದ್ಧ-ಬಸವ-ಬಾಬಾಸಾಹೇಬರ ಚಿಂತನೆಗಳನ್ನು ಬಳಸಿಕೊಂಡು ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ಅವಶ್ಯಕವಾಗಿದೆ. ಅದಕ್ಕೆ ಪೂರಕವಾಗಿ ಗಣಕರಂಗ ಪ್ರಕಾಶನದ ಈ ಕೃತಿಯು ಸ್ಪಂಧಿಸುತ್ತದೆ ಎಂದು ವಿವರಿಸಿದರು. ಕೃತಿ ಪರಿಚಯಿಸಿದ ಸಾಹಿತಿ ಸುನೀತಾ ಮೂರಶಿಳ್ಳಿ ಅವರು ಸ್ಪರ್ಧೆಯನ್ನು ಆಯೋಜಿಸುವ ಮೂಲಕ, ಹೊಸಬರಿಂದ ಲೇಖನಗಳನ್ನು ಬರೆಸಿ, ಅವುಗಳನ್ನು ಸಂಪಾದಿಸಿ, ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿರುವುದು ಗಣಕರಂಗ ಸಂಸ್ಥೆಯ ಮಾತೃಹೃದಯದ ಪ್ರೋತ್ಸಾಹಕ ಗುಣವನ್ನು ಗಮನಿಸಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೃತಿಯ ಸಂಪಾದಕ ಸಿದ್ಧರಾಮ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಶಶಿಧರ ತೋಡಕರ್ ಮತ್ತು ಸ್ಪರ್ಧೆಯ ತೀರ್ಪುಗಾರ ಡಾ.ಸದಾಶಿವ ಮರ್ಜಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ.ಮೃತ್ಯುಂಜಯ ಶೆಟ್ಟರ್ ಹಾಗೂ ಸಂಗಡಿಗರು ವಚನಗಾಯನ ಪ್ರಸ್ತುತಪಡಿಸಿದರು. ಡಾ.ಪ್ರಕಾಶ ಮಲ್ಲಿಗವಾಡ ಪ್ರಾರ್ಥಿಸಿದರು. ಶರಣಸಾಹಿತಿ ಡಾ.ಪುಷ್ಪಾವತಿ ಶಲವಡಿಮಠ ನಿರೂಪಿಸಿದರು. ನಂತರ ಸ್ಪರ್ಧಾವಿಜೇತರಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು. ಪ್ರೊ.ಎನ್.ಬಿ.ಹವಳಪ್ಪನವರ, ವೈ.ಬಿ.ಚಲವಾದಿ, ಶ್ರೀಮಂತ ಹೊಸಮನಿ, ಸದಾಶಿವ ಅವಧಿ, ನಟರಾಜ ಮೂರಶಿಳ್ಳಿ, ಭೀಮನಗೌಡ ಕಠಾವಿ, ಅನುಪಮಾ ಪಾಟೀಲ, ಡಾ.ಉಮಾ ಅಕ್ಕಿ, ಶಂಕ್ರಮ್ಮ ಗಾಡದ, ಪಾರ್ವತಿದೇವಿ ತುಪ್ಪದ, ಸಂಜೀವ ಪೂಜಾರ, ಬಸವರಾಜ ತೋಟಗೇರ, ಪದ್ಮಾ ಉಮರ್ಜಿ, ಶ್ರೀಮತಿ ಮಲ್ಲಮ್ಮ ಕಮ್ಮಾರ, ಗಂಗಾದೇವಿ ಚಕ್ರಸಾಲಿ ಮೊದಲಾದವರು ಇದ್ದರು.
