ಶ್ಶ್…!
ಸಾವಧಾನ
ಕವಿತೆಗಳಿಗೆ ದಣಿವಾಗಿದೆಯಂತೆ
ಓಹ್ ಪಿರಿಯಡ್ಸ್ ಇರಬಹುದಾ ?
ಅದು ಹೇಗೆ ಹೇಳುತ್ತೀರಿ ?
ಒಂದು ವೇಳೆ
ಇನ್ಯಾವುದೋ ಒತ್ತಡ ಇದ್ದರೂ ಇರಬಹುದು
ಗಂಟಲಿಗೆ ಸಿಕ್ಕಿಸಿಕೊಂಡಿದ್ದು
ಕಣ್ಣುಗಳಲ್ಲಿ ಬಚ್ಚಿಟ್ಟುಕೊಂಡಿದ್ದು
ಎದೆಯೊಳಗೆ ಭಾರವಾಗಿಸಿಕೊಂಡಿದ್ದು
ದೇಹದ ದಣಿವು ಮೀರಿದ್ದು
ಒಟ್ಟಿನಲ್ಲಿ, ಮಾತುಗಳಲ್ಲಿ ಹೇಳಿಕೊಳ್ಳಲಾಗದ್ದು..,
ಮೌನದಲ್ಲಿ ನುಂಗಲೂ ಆಗದ್ದೂ…,
ಅಸಲಿಗೆ ಈ ಕವಿತೆಗಳಿಗೆ
ಬಾಯಿಗೆ ಬೀಗ ಜಡಿಯಲು ಸಂಚು ಹೂಡಿದವ
ಯಾರೋ ದೊಡ್ಡ ಕ್ರೂರಿಯೇ ಇರಬೇಕು
ಕವಿತೆಯೊಂದು ಕಾಡು ಎನ್ನುವುದನ್ನು
ಮರೆತಿದ್ದವನೇ ಇರಬೇಕು
ತನ್ನಷ್ಟಕ್ಕೆ ತಾನು ಗುನುಗಿಕೊಳ್ಳುವ
ಹಾಡು ಎನ್ನುವುದು ಗೊತ್ತಿಲ್ಲದವನೇ ಇರಬೇಕು
ಅದು ಮಣ್ಣಲ್ಲಿ ಮಣ್ಣಂತೆ, ಹೆಣ್ಣಲ್ಲಿ ಹೆಣ್ಣಂತೆ,
ಕಣ್ಣೊಳಗೆ ಒಳಗಣ್ಣಂತೆ ಎನ್ನುವುದು
ಅರ್ಥವಾಗದವನೇ ಇರಬೇಕು
ಅವನೇನಾದರೂ ನಿಮಗೆ ಎದುರಾದರೆ,
ಇಷ್ಟಂತೂ ಸಂದೇಶ ಕೊಟ್ಟುಬಿಡಿ
ಕಾಡಹಾದಿಯಲ್ಲಿ
ನೆಡೆದು ಹೋಗುವುದಾದರೆ,
ಸದ್ದು ಮಾಡದೇ, ಸುಮ್ಮನೆ ಹೋಗಿಬಿಡು ಎಂದು..,
ಕಾಡನ್ನು ಕೊಂದು, ಬದುಕಿ ಉಳಿದವರ ಇತಿಹಾಸ
ಈ ಭೂಮಿಯ ಮೇಲೆ ಎಲ್ಲೂ ದಾಖಲೆಯಾಗಿಲ್ಲವೆಂದು

-ಸುರಭಿ ರೇಣುಕಾಂಬಿಕೆ, ಬೆಂಗಳೂರು
—–
