ಅಪ್ಪ ಎಂಬ ಜೀವ
ಅಪ್ಪನ ಬಗೆಗೆ
ಚಂದದ ಕವಿತೆಯೊಂದನ್ನು
ಬರೆದು ಕೊಡಿ,
ಪ್ರಕಟಿಸುತ್ತೇವೆ ಎಂದು, ಹೀಗೆ…
ಅವರು ಕೇಳುತ್ತಾರೆ ನೋಡಿ
ಹೇಗೆ ಹೇಳಲಿ ಅವರಿಗೆ
ಅಪ್ಪ ಎಂಬುವ ದರ್ಪ
ಅಮ್ಮನ ಹಾಗೆ ಎಂದೂ ಮಾಡಿಲ್ಲ ಮೋಡಿ!
ಅವನದೇನಿದ್ದರೂ,
ಮರೀಚಿಕೆಯ ಪ್ರೇಮದ ಫಲವತ್ತಾದ ಹಾದಿ
ಕೇಳುವುದನ್ನೆಲ್ಲ ಬೇಡವೆಂದು
ಬೇಕಾದುದನ್ನೆಲ್ಲಾ ತಂದು ಸುರಿಯುತ್ತಾನವನು
ಅಪ್ಪನಿಗೆ ಗೊತ್ತು!
ಯಾವುದು ಸರಿ ಮತ್ತು ತಪ್ಪು
ಎಲ್ಲವೂ….
ಎಂದೂ ಶಾಲೆಗೆ ಹೋಗದವನು
ಕಲಿಸಿದನಲ್ಲ ಬದುಕಿನ ಪರಿಪಾಠವನು
ಲೇಖನಿ ಹಿಡಿಯಲು ಬಾರದವನು
ಸುವರ್ಣಾಕ್ಷರಗಳಲ್ಲಿ ಭವಿಷ್ಯವನ್ನೇ ಬರೆದನು
ಅಪ್ಪನಿಗೆ ಗೊತ್ತು ಹಸಿವು ಏನೆಂದು
ಗೊತ್ತು ದಾರಿದ್ರ್ಯ ಮತ್ತು ಅವಮಾನ ಎಲ್ಲವೂ
ನನಗಾಗಿ ಎಲ್ಲವನ್ನೂ ಮೆಟ್ಟಿ ನಿಂತು
ಸಂತಸದ ಮುಗಿಲಾದವನು
ಚಳಿಗೆ ಬೆಚ್ಚನೆಯ ಕೌದಿಯಾಗಿ
ಬಿಸಿಲಿಗೆ ತಂಪಾದ ಗಾಳಿಯಾಗಿ
ಸ್ವತಃ ತಾನೇ ಉರಿದುರಿದು
ಕತ್ತಲ ಬದುಕಿಗೆ ಬೆಳಕಾದವನು
ನಾನು ಬಿದ್ದು ಮಾಡಿಕೊಂಡ ಗಾಯವ ಕಂಡು
ತಾನು ನೋವು ಉಂಡವನು
ನನ್ನ ಸುರಕ್ಷಿತ ಭವಿಷ್ಯದ ಕನಸುಗಳನ್ನು
ಹಗಳಿರುಳೆನ್ನದೆ ಹೆಣೆಯುತ್ತಿದ್ದನು
ಆದರೂ ಪ್ರತಿಬಾರಿಯೂ ಅರ್ಥವಾಗದೇ ಉಳಿಯುತ್ತಿದ್ದನು!
ಕಷ್ಟಗಳು ಬಂದಾಗ ಕದಲದ ಬೆಟ್ಟವೇ ಆಗುವನು
ಯಾವುದಕ್ಕೂ ಅಂಜದ, ಅಳುಕದ,
ಎದೆಗುಂದದ ಗಟ್ಟಿ ಜೀವದವನು
ಸುಳ್ಳಿನ ದಾರಿ ಮುಳ್ಳಿನ ದಾರಿಯದುವೆ
ಸತ್ಯಸಂಧನಾಗಿರು ಎಂದು ಹೇಳಿಕೊಟ್ಟವನು
ಯಾರ ಮುಂದು ಕರ ಚಾಚದವನು
ತಲೆಯೆತ್ತಿ ನಿಲ್ಲುವುದನ್ನು ಕಲಿಸಿದಾತನು
ನೆತ್ತರನ್ನು ಬಸಿದು ಅಮೃತವನ್ನಿತ್ತವನು
ತಾನು ಹರಿದ ಅಂಗಿ ತೊಟ್ಟು
ಎನಗೆ ಹೊಸ ಅರಿವೆ ಉಡಿಸಿ
ಮನದ ತುಂಬಾ ಖುಷಿ ಪಟ್ಟವನು
ನನ್ನ ನಗುವಲಿ, ತನ್ನ ನೋವು ಮರೆಯುತ್ತಿದ್ದವನು
ಎಂದೂ ಕೈ ಎತ್ತಿ ಹೊಡೆಯದವನು
ನನ್ನ ಪರವಾಗಿ ಜಗಳ ಕಾದವನು
ತಾನು ಕಾಣದನ್ನು ನೀನಾದರು ನೋಡೆಂದು
ಹೆಗಲ ಮೇಲ್ಹೊತ್ತು ಹೆಜ್ಜೆ ಹಾಕಿದವನು
ತನ್ನ ಉದರದ ಹಸಿವನ್ನು ಮುಚ್ಚಿಟ್ಟು
ನನಗಾಗಿಯೆ ಅನ್ನದ ಅಕ್ಷಯ ಪಾತ್ರೆ ತೆರೆಯುತ್ತಿದ್ದವನು
ದೇವನು ಸಹ ಅಪ್ಪನ ಮುಂದು
ಸಣ್ಣವ ಎನಿಸುವನು
ದೇವಲೋಕದಲ್ಲಿ ಅಲ್ಲೆಲ್ಲೋ ಸ್ವರ್ಗವಿದೆಯಂತೆ
ಇಹದಲ್ಲೆ ನನಗಾಗಿ
ತನ್ನ ಬೆವರಿನಿಂದ ಸ್ವರ್ಗ ಸೃಷ್ಟಿಸಿಹನು
ಅಳುವನ್ನು ನಗುವಾಗಿ ಬದಲಾಯಿಸಬಲ್ಲ
ಮಾಂತ್ರಿಕನವನು
ಕೇಳದೆನೆ ವರ ನೀಡುವ ಮಹಾತ್ಮನು
ಅಪ್ಪ ಎಂದರೆ….
ದೇವರಲ್ಲರಬಹುದು, ನಿಜ
ಆದರೆ….
ದೇವದೂತನಲ್ಲದೇ ಮತ್ತೇನು ಅವನು?

◼️ಚುಕ್ಕಿ ಚಿತ್ರ ಹಾಗೂ ಕವಿತೆ: ಜಬೀವುಲ್ಲಾ ಎಂ. ಅಸದ್ ಹಿರಿಯೂರು
