
ಬಳ್ಳಾರಿ: ನಗರದ ವೀರಶೈವ ವಿದ್ಯಾವರ್ಧಕ ಸಂಘದ ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯ ಹಾಗೂ ಹೆಚ್.ಡಿ.ಎಫ್.ಸಿ. ಬ್ಯಾಂಕ್, ಬಳ್ಳಾರಿ ಶಾಖೆಯ ಸಹಯೋಗದಲ್ಲಿ ಸೋಮವಾರ ಮಹಾವಿದ್ಯಾಲಯದ ಆವರಣದಲ್ಲಿ ಸ್ವಯಂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯದ ಅಧ್ಯಕ್ಷರಾದ ಎಲ್.ಟಿ. ಶೇಖರ್ ಅವರು ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ಅಧೀಕ್ಷಕರಾದ ಡಾ. ಇಂದುಮತಿ ವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಸಂದರ್ಭದಲ್ಲಿ ರಕ್ತದಾನದ ಅಗತ್ಯತೆ ಹಾಗೂ ಅದರ ಮಹತ್ವವನ್ನು ವಿವರಿಸಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಡಾ. ಸೋಮನಾಥ ಎಸ್.ಎಂ ಅವರು ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಮಹತ್ವ ಮತ್ತು ಸಾಮಾಜಿಕ ಕಾಳಜಿಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಧ್ಯಾಪಕ ಡಾ. ಆರ್.ಎಲ್.ಎನ್. ಮೂರ್ತಿ ಅವರು ನಿರೂಪಿಸಿದರು. ಈ ಶಿಬಿರದಲ್ಲಿ ತೊಗರಿ ವೀರಮಲ್ಲಪ್ಪ ಸ್ಮಾರಕ ಔಷಧ ವಿಜ್ಞಾನ ಮಹಾವಿದ್ಯಾಲಯದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ರಕ್ತನಿಧಿಗೆ ರಕ್ತವನ್ನು ಸಮರ್ಪಿಸಿದರು.

ರಕ್ತದಾನ ಶಿಬಿರವು ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಬಿಂಬಿಸಿತು.
