ಅನುದಿನ ಕವನ-೧೮೧೦, ಕವಯತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ:ಅವಳಿಗೊಂದು ಹೆಸರಿದೆ

ಅವಳಿಗೊಂದು ಹೆಸರಿದೆ

ಒಂದೇ ಹೆಸರಿತ್ತು ಅವಳಿಗೆ!
ನದಿ ತಟದ ಮರಳೂ
ಮರುಳುಗೊಳ್ಳುವಂತೆ
ಹೊಸ ಕತೆಗಳ ಕಟ್ಟಿದ ನೀವು
ಅವಳೇ ಮರೆತು ಹೋಗುವಷ್ಟು
ಹೆಸರ ಕೊಟ್ಟಿರಿ…

ಅಲೆಮಾರಿ ಹೈದನೊಬ್ಬ
ಪಾರಿಜಾತ ಹೆಕ್ಕುತ್ತಿದ್ದವಳ
ಬೆರಳು ಸವರಿ ಹೋದ
ಸಂಗತಿಯನ್ನಿಟ್ಟು
ಎಷ್ಟೆಲ್ಲ ಪುಳಕ ಕೊಟ್ಟಿರಿ!

ವಯಸಿನ ಲೆಕ್ಕವಿಡಲು
ಬರದವಳನು ಬಳಿಯೇ ಕುಳ್ಳಿರಿಸಿ
ಹೊರಟೇ ಹೋದವನ
ಹೆಸರಿಗಿವಳ ಹೆಸರು ಜೋಡಿಸಿ
ಎಷ್ಟೆಲ್ಲ ಹರಕೆ ಇಟ್ಟಿರಿ!

ಅಮಾಯಕಿಯ ಕೊಡಪಾನ
ಇಸಿದು ಸಿಂಗರಿಸಿ
ವಿರಹಕ್ಕೆ
ಉತ್ಕಟ ಪ್ರೇಮದ ಬಣ್ಣ ಹಚ್ಚಿ
ಎಷ್ಟೆಲ್ಲ ಕವಿತೆ ಕಟ್ಟಿದಿರಿ…!

ಅವನನು ದೇವರಾಗಿಸುವ
ಸುದ್ದಿ ಬಂದ ಕೂಡಲೇ,
ಅಂಥವಳೊಬ್ಬಳು ಇರಲೇ ಇಲ್ಲವೆಂಬ
ಚರಿತ್ರೆಯನೇ ಸೃಷ್ಟಿಸಿದಿರಿ!

ಅವಳೀಗ…?

-ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ