ಅನುದಿನ ಕವನ-೧೮೫೬, ಕವಯತ್ರಿ: ವೇದಾರಾಣಿ ದಾಸನೂರ, ಹುಬ್ಬಳ್ಳಿ, ಕವನದ ಶೀರ್ಷಿಕೆ: ಅರ್ಥಮಾಡಿಸು ದೇವಾ

ಅರ್ಥಮಾಡಿಸು ದೇವಾ

ಬಾಯಲ್ಲಿ ಹಲ್ಲಿರದ ಮುದುಕಿ
ಕೈಯಲ್ಲಿ ಕಡ್ಲಿಗಿಡ ಹಿಡಿದು
ಹಲುಬುತ್ತಿರುವಳು ದಾರಿಹೋಕರಲ್ಲಿ
ಕಡ್ಲಿ ಖರೀದಿಸಿರೆಂದು.

ಪುಣ್ಯವಂತರು ಯಾರಾದರೂ ಬರುವರೊ?
ಮೊಬೈಲ್ ಹಿಡಿದು ಸಾಗುತ್ತಿರುವ
ಸಾಲು ಸಾಲು ಯುವಕರ ಕಣ್ಣು
ಬೇಕರಿಯ ಗಾಜಿನಲ್ಲಿ ಹೊಂದಿಸಿಟ್ಟ
ಬಣ್ಣ ಬಣ್ಣದ ಕೇಕು, ಪಪ್ಪುಗಳತ್ತ ನೆಟ್ಟಿದೆ.
ಹಾರಾಡುವ ನೊಣಗಳನೂ ಲೆಕ್ಕಿಸದ ಚಪಲ
ಮುಗಿಲು ಮುಟ್ಟಿದೆ.

ಚಾವಕಾಸಿ ಮಾಡುವ ಹೆಂಗಸರೆಡೆಗೆ ಬೀರುವ
ಮುದುಕಿಯ ದಯನೀಯ ನೋಟದಲಿ
ನಂದಿ ಹೋಗುವ ದೀಪದ ವಿನಮ್ರತೆ.
ಕರಗಿಹೋದ ಮಾಂಸಖಂಡಗಳ ಕೈಯಲ್ಲಿ
ಮೈತುಂಬಿಕೊಂಡ ಕಡ್ಲಿಗಿಡ! ಹಿಡಿದು
ಮಾರುತ್ತಿದ್ದಾಳೆ ಮುದುಕಿ
ಹಸಿ ಹಸಿ ಹಸುರ ಹಂಬಲಗಳ
ಕೊಳ್ಳುವರೆ? ಯಾರಾದರು ಪುಣ್ಯವಂತರು!

ಹೊತ್ತುತಂದು ಮಾರುವ ಪಯಣದಲಿ
ಉಳಿವ ವಿಷಯ ವಾಸನೆಗಳ ವಿಷಾದ.

ಕಡ್ಲಿ ಬಲಿತು ‘ಮದವೆನ್ನುವ’
ಕೊಳ್ಳುವ ಮನಸ್ಸುಗಳಿಗೆ ಅರ್ಥವಾಗುವುದೇ?
ಒಕ್ಕಲು ಮಕ್ಕಳ ಬಿಕ್ಕಳಿಕೆ,
ಫಲವಂತಿಕೆಗೆ ಬೇಕಾಗುವ ಸಂಯಮ,
ಹೀಚಾಗುವ, ಕಾಯಾಗುವ,
ಬಲಿಯುವ, ಒಣಗುವ, ಮಾಗುವ,
ಕೊನೆಗೆ ನನ್ನಂತೆ ಒಣಗಿ ಉದುರುವ
ಕೊನೆಯ ಹಂತದ ‘ತಿಳಿ ಅರಿವು’’
ಹೇಳುವುದು ಸರಳವಲ್ಲ ದಿಟ್ಟಿಸಬೇಕು.

ಮಣ್ಣ ಕಣ ಕಣವ ಹೀರಿ ಬೆಳೆಯುವ, ಬೆಳೆಸುವ ಮರ್ಮ!
ಫಲವಂತಿಕೆ ನೀಡುವುದು
ಮೊಬೈಲ್ ನೋಡುವಷ್ಟು ಸಲೀಸಲ್ಲ
ಅರ್ಥಮಾಡಿಸು ದೇವಾ
ಒಕ್ಕಲು ಮಕ್ಕಳ ‘ಕೊಡು ಕೈ ದಾನ’.


-ವೇದಾರಾಣಿ ದಾಸನೂರ, ಹುಬ್ಬಳ್ಳಿ

Leave a Reply

Your email address will not be published. Required fields are marked *