ಬುದ್ಧಿ ಮತ್ತು ಹೃದಯ
ಧೋ ಎಂದು ಸುರಿವ ಮಳೆಗೆ ಹಿಡಿದ ಕೊಡೆ
ಬುದ್ಧಿಯ ಬಾಲ ಹಿಡಿದ ಛತ್ರಿಗಳು
ಮಳೆ ಬಂದ ಕಾಲಕ್ಕೆ ಎದೆಹಾಲ ಉಣಿಸಿದ ಹಾಗೆ
ಮನದೊಳಗಿನ ಗರಿಗೆದರಿದ ಭಾವ.
ಶೀತವಾದೀತು ಹೆಜ್ಜೆಯಿಡು ಎಂದ ಮತಿ
ಖುಷಿ ಪಡು ಗೆಜ್ಜೆಕಟ್ಟಿದ ಹೆಜ್ಜೆನಾದಕೆ ಎಂದ ಅಂತರಂಗ
ಆವರಣದೊಳಗೆ ಇರು ಕಣ್ಣು ಕಟ್ಟಿ ನಡೆ ಎಂದ ಮೆದುಳು.
ಅನಾವರಣವಾಗದೆ ಆರೋಹಣವಿಲ್ಲವೆಂದ ಮನ.
ಮಳೆ ಒಂದೇ ಇಳೆಗೆ ತಿಳಿವೊಂದೇ ಮತಿಗೆ
ಅಂತರಂಗದ ಅನಾವರಣವೇ ಬೇಕು
ಗತಿಗೆ, ಸದ್ಗತಿಗೆ , ಸುಕೃತಕೆ.
-ತನಾಶಿ, ಬೆಳಗಾವಿ
