ಅನುದಿನ ಕವನ-೧೯೦೬, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ವರ್ಷಕ್ಕೆ ಮೂರು ಬಾರಿ
ಜೀವದೊಡನೆ ಚೆಲ್ಲಾಟವಾಡಿ
ಸಾವಿಗೆ ಮೋಸವೆಸಗಿ
ಮುನ್ನುಗ್ಗುತ್ತಾಳೆ..

ಹೋಮಾಹಕ್ಕಿಯೊಡನೆಯೂ
ಒಂದೆರಡು ಬಾರಿ ಕೂತು
ಮಾತನಾಡಿದ್ದಾಳೆ.
ಯಾರಿಂದ ಯಾರು ಕಲಿತರು
ಎನ್ನುವುದು ಇಬ್ಬರಿಗೂ
ತುಸು ಗೊಂದಲವೇ..

ಪ್ರತಿ ಬಾರಿ ಸೋತು, ಸುಟ್ಟು
ಬೂದಿಯೊಳಗಿಂದ ಎದ್ದು
ಬಂದಾಗಲೂ ಹೊಸದಾಗಿ
ಕಾಣಿಸಿಕೊಳ್ಳುತ್ತಾಳೆ.
ಒಂದಿಷ್ಟೇ ಹೆಚ್ಚು ಸುಂದರವಾಗಿ..

ಅವಳ ಜೊತೆ ಸಮಯ
ಕಳೆದವರಿಗೆಲ್ಲ ಆಕೆ ನಿಗೂಢವೇ.‌
ಕಣ್ಣು ತುಂಬಿ ಕೂತಿದ್ದಾಳೆಂದು
ಭುಜ ಸವರುವ ಮೊದಲೇ
ಕಣ್ಣೀರು ಜ್ವಾಲಾಮುಖಿಯಂತೆ
ಸುಟ್ಟಿರುತ್ತದೆ..
ಒಂದಿಷ್ಟೇ ಧೈರ್ಯ ಮಾಡಿ
ಕಣ್ಣೀರು ಒರೆಸುವ ಮೊದಲೇ
ಜೋರಾಗಿ ನಕ್ಕುಬಿಟ್ಟಿರುತ್ತಾಳೆ.
ನಗುವ ಕಣ್ಣುಗಳನ್ನು ನೋಡಿದವರಿಗೆ
ಅದರಲ್ಲಿ ಬೆಂಕಿಯ ಜ್ವಾಲೆಗಳೂ
ಕಂಡಿರಬಹುದು.

ಜೊತೆಗಿದ್ದೂ ದಕ್ಕಿಸಿಕೊಳ್ಳಲಾಗದ
ಸಂಕಟಕ್ಕೆ ಬದುಕಿಗೆ ಅವಳ
ಮೇಲಿನ ಅಸೂಯೆ ಜಾಸ್ತಿ..‌
ಆದರೆ..
ಸಾವಿಗೇ ವಿರಹಗೀತೆ
ಕಲಿಸಿದವಳಿಗೆ
ಬದುಕು ಯಾವ ಲೆಕ್ಕ..?


-ಸಮುದ್ಯತಾ ಕಂಜರ್ಪಣೆ, ಬೆಂಗಳೂರು