ಅನುದಿನ ಕವನ-೧೯೦೫, ಕವಯತ್ರಿ: ಡಾ.ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು

ಬೊಗಸೆ ಹಿಡಿದಿದ್ದೇನೆ ಯುಗಾದಿ
ನೀನು ಅಣಿ ಮಾಡಿರುವ ಬೇವು ಬೆಲ್ಲಕ್ಕೆ :

ನೆನ್ನೆ ಇಂದಿನೊಂದಿಗೆ ಧುತ್ತೆಂದು
ನಿಲ್ಲಬಹುದಾದ ನಾಳೆಗಳ ಆಳ
ಇಳಿದಷ್ಟೂ ನಿಗೂಢ ದಾರಿ
ತಿಳಿಯಬೇಕಿಲ್ಲ ಬಿಡು ಸೃಷ್ಟಿ ಸ್ಥಿತಿ ಲಯ
ಪರಮಕಾರಣ ಅನುಸರಣ

ಬೆನ್ನ ಹಿಂದಿನ ಹೆಜ್ಜೆ ತಂದು ನಿಲ್ಲಿಸಿದೆ
ದಿವ್ಯ ಗಮನದ ಗಮ್ಯದೆಡೆಯಲ್ಲಿ
ನೋವು ನಲಿವು ಹುಟ್ಟು ಸಾವು
ಬೇವು ಬೆಲ್ಲದೂಟ
ಎಷ್ಟೆಲ್ಲಾ ಮಾಯೆಯಾಟ!

ಕೈಹಿಡಿದು ನಡೆಸಿದೆಡೆಯೆಲ್ಲಾ ಕಣ್ಮುಚ್ಚಿ
ಅಡಿಯಿಟ್ಟಿದ್ದೇನೆ.
ಹೂವೋ ಮುಳ್ಳೋ ಏಳೋ ಬೀಳೋ
ಏನಾದರಿರಲಿ
ನಡೆದದ್ದೇ ದಾರಿ ಮುಟ್ಟಿದ್ದೇ ಗುರಿ

ಎದೆಯೊಳಗೆ ಪ್ರೇಮಪಚ್ಚೆಯ ಪದಕ
ಮುಖದಲ್ಲಿ ಮಂದಹಾಸದ ಬೆಳಕು
ಮುಂದೆ….
ಅಗಾಧ ಅನಂತ ಅವಕಾಶದೊಳಗೆ
ಚಾಚಿಕೊಂಡಿರುವ ಅದೃಶ್ಯ ತೋಳುಗಳ
ಭರವಸೆಯ ಭವಿತವ್ಯದ
ಭರಪೂರ ಪ್ರೇಮಸೇತು ” ಯುಗಾದಿ”.

ಎಲ್ಲರಿಗೂ ಯುಗಾದಿ ಶುಭಾಶಯಗಳು

-ಡಾ. ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು

Leave a Reply

Your email address will not be published. Required fields are marked *