ಅನುದಿನ ಕವನ-೧೯೦೩, ಕವಯತ್ರಿ: ರಮ್ಯ ಕೆ ಜಿ, ಮೂರ್ನಾಡು, ಕಾವ್ಯ ಪ್ರಕಾರ: ಗಜ಼ಲ್

ಗಜ಼ಲ್

ಈ ಊರಿಗೆ ಹೆಸರೇನೆಂದು ಕೇಳಬೇಡ
ಈ ದೂರಿಗೆ ಸಾಕ್ಷಿ ಬೇಕೆಂದು ಕೇಳಬೇಡ

ಜಾತ್ರೆಯಲೂದಿದ ಗಾಳಿ ಬುಗ್ಗೆ ನಾನು
ಹಾರುವ ದಿಕ್ಕು ಯಾವುದೆಂದು ಕೇಳಬೇಡ

ಮಿಡಿಯೊಡೆದ ಮಾವು ಘಮ್ಮೆಂದಿದೆ
ಗಂಧ ಹಬ್ಬಿದ ದೂರವೆಷ್ಟೆಂದು ಕೇಳಬೇಡ

ಹೂ ತೂಗಿದ ಹಕ್ಕಿ ಹಾಡೇ ನೆಪವಾಯ್ತು ಹೊಯ್ದಾಟದ ಪಾಡೇನೆಂದು ಕೇಳಬೇಡ

ಖಾಲಿಯಾದ ಎದೆಯೊಳಗೇನಿದೆ ‘ಪ್ರಾಣವೇ?
ಉಸಿರ ಭಾರಕೆ ಕಾರಣ ನೀಡೆಂದು ಕೇಳಬೇಡ


– ರಮ್ಯ ಕೆ ಜಿ, ಮೂರ್ನಾಡು

Leave a Reply

Your email address will not be published. Required fields are marked *