ಆರೋಗ್ಯ ಮತ್ತು ಜಾಗೃತ ಸಮಾಜ ನಿರ್ಮಿಸುವಲ್ಲಿ ವೈದ್ಯರು ಹಾಗೂ ಪತ್ರಕರ್ತರ ಪಾತ್ರ ಅನನ್ಯ -ಡಾ. ಅರವಿಂದ ಪಟೇಲ್

ಸಿರುಗುಪ್ಪ, ಜು.3: ಆರೋಗ್ಯವಂತ ಮತ್ತು ಜಾಗೃತ ಸಮಾಜ ನಿರ್ಮಿಸುವಲ್ಲಿ ವೈದ್ಯರು ಹಾಗೂ ಪತ್ರಕರ್ತರ ಮಹತ್ವದ್ದು ಎಂದು ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ, ಸಾಹಿತಿ ಡಾ. ಅರವಿಂದ ಪಟೇಲ್ ಅವರು ತಿಳಿಸಿದರು.

ಪಟ್ಟಣದ ಎಸ್ ಇ ಎಸ್ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ‘ವಿಜಯನಗರ ವಾಣಿ’ ಕನ್ನಡ ದಿನಪತ್ರಿಕೆ ಹಾಗೂ ಚೈತನ್ಯ ಯುವ ಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಹಾಗೂ ‘ಪತ್ರಿಕಾ‌ ದಿನಾಚರಣೆ’  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.                        ವೈದ್ಯರು ರೋಗಿಯ ದೈಹಿಕ ಆರೋಗ್ಯವನ್ನು,  ಪತ್ರಕರ್ತರು ಸಮಾಜದ ಸ್ವಾಸ್ಥ್ಯವನ್ನು  ಕಾಪಾಡುತ್ತಾರೆ ಎಂದು  ಹೇಳಿದರು.

ಪ್ರಕೃತಿಯೊಂದಿಗೆ ಬೆರೆಯುವುದನ್ನು ನಾವು ಮರೆತಿದ್ದೇವೆ. ಇತ್ಯಾಜ್ಯ ಇಂದು ಮಾನವನ ದೇಹದ ಮೇಲೆ ದೊಡ್ಡ ಪ್ರಮಾಣದ ಹಾಗಿ ಉಂಟು ಮಾಡುತ್ತಿದೆ ಎಚ್ಚರಿಸಿದರು.

ಪ್ಲಾಸ್ಟಿಕ್ ಬಳಕೆಯಿಂದ ಬಂಜೆತನ ಉಂಟಾಗುತ್ತಿದ್ದು, ಸರ್ಕಾರ ಹೆಚ್ಚು ಮಕ್ಕಳನ್ನು ಹೇರಬೇಕು ಎಂದು ಹೇಳುವ ಸಂದರ್ಭ ಬಂದಿದೆ ಎಂದರು.

ಆಹಾರದಲ್ಲಿ ಅಜಿನೋ ಮೋಟೋ ಬಳಕೆ ಹೆಚ್ಚಾಗುತ್ತಿದ್ದು ಇದು ಹಲವಾರು ಕಾಯಿಲೆಗಳಿಗೆ ಕಾರಣವಾಗಿದೆ. ಕೊರೋನಾ,  ಹವಾಮಾನ ವೈಪರೀತ್ಯದಿಂದಾಗಿ ಆಗುವ ಅನಾಹುತಗಳ ಸಂದರ್ಭದಲ್ಲಿ ವೈದ್ಯರ ಸೇವೆ ಅಭೂತಪೂರ್ವ ಎಂದು ಜಗತ್ತಿಗೆ ಗೊತ್ತಾಗಿದೆ ಎಂದು ತಿಳಿಸಿದರು.

ವೈದ್ಯರೂ ಸಹ ಇಂದು ಹಲವಾರು ಮಾನಸಿಕ ಒತ್ತಡಗಳಿಗೆ ಸಿಲುಕಿದ್ದಾರೆ. ಚಿಕನ್ ಗುನ್ಯಾ ಕಾಯಿಲೆಯ ಸಂದರ್ಭದಲ್ಲಿ ಪತ್ರಿಕೆಗಳು ನಿರ್ವಹಿಸಿದ ಪಾತ್ರದಿಂದಾಗಿ ಕಾಯಿಲೆಗೆ ಸೂಕ್ತ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಯಿತು ಎಂದು ತಜ್ಞ ವೈದ್ಯರಾಗಿರುವ ಡಾ. ಪಟೇಲ್  ಹೇಳಿದರು.

ಪ್ರಸ್ತುತ ಮಕ್ಕಳಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ಈ ಬಗ್ಗೆ ತಿಳುವಳಿಕೆ ಮಾಡಿಸುವ ಕಾರ್ಯ ಆಗಬೇಕು ಎಂದು ತಿಳಿಸಿದರು.

ರೈತರು ಕಳೆನಾಶಕ ಬಳಕೆ ಕಡಿಮೆಗೊಳಿಸಬೇಕು. ಪಟಾಕಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಕಲಬೆರಕೆ ಆಹಾರ ತ್ಯಜಿಸಬೇಕೆಂದು ಸಲಹೆ ನೀಡಿದರು.

ಕಾರ್ಖಾನೆಗಳ ತ್ಯಾಜ್ಯ ನದಿ ಮೂಲಗಳಿಗೆ ಸೇರುತ್ತಿದ್ದು ಇದಕ್ಕೆ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ  ಇಲ್ಲದಿರುವುದು ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕಾ ದಿನಾಚರಣೆ ಕುರಿತು ಉಪನ್ಯಾಸ ನೀಡಿದ  ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ  ಸಿ. ಮಂಜುನಾಥ, ಭಾರತೀಯ ಪತ್ರಿಕೋದ್ಯಮಕ್ಕೆ ಕನ್ನಡ ಪತ್ರಿಕೆಗಳ ಕೊಡುಗೆ ಅಪಾರ ಎಂದು‌ ಹೇಳಿದರು.                       ಕನ್ನಡ ಪತ್ರಿಕೆಗಳು ಭಾಷಾಭಿವೃದ್ಧಿ, ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಮತ್ತು ಸಾಮಾಜಿಕ ಸುಧಾರಣೆಗೆ ನೀಡಿರುವ ಕೊಡುಗೆ ಮಹತ್ವದಾಗಿದೆ ಎಂದರು.                                            ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು ರಾಷ್ಟ್ರ ನಿರ್ಮಾಣದಲ್ಲಿ ತನ್ನದೇ ಆದ ರೀತಿಯಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

1843ರ ಜುಲೈ 1 ರಂದು ಕನ್ನಡದ ಮೊದಲ ಪತ್ರಿಕೆ  ಮಂಗಳೂರ ಸಮಾಚಾರ ಆರಂಭವಾಗಿದ್ದು, ಈ ದಿನವನ್ನು ರಾಜ್ಯದಲ್ಲಿ  ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಜರ್ಮನಿಯ ಪಾದ್ರಿ ಹರ್ಮನ್ ಮೊಗ್ಲಿಂಗ್ ಕನ್ನಡ ಕಲಿತು ಮೊದಲ ಪತ್ರಿಕೆ ಪ್ರಕಟಿಸಿ ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದೆನಿಸಿಕೊಂಡಿದ್ದಾನೆ ಎಂದು ಕೊಂಡಾಡಿದರು.

ಮಂಗಳೂರ ಸಮಾಚಾರ 16 ಸಂಚಿಕೆಗಳ ಬಳಿಕ ಮಾ.1 , 1844 ರಿಂದ ಬಳ್ಳಾರಿಯಲ್ಲಿ  ಕನ್ನಡ ಸಮಾಚಾರ ಹೆಸರಿನಲ್ಲಿ ಪ್ರಕಟವಾಯಿತು ಎಂದು ವಿವರಿಸಿದರು.

ಜ್ಞಾನಾರ್ಜನೆಗೆ ಪತ್ರಿಕೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳಿಸುತ್ತವೆ ಹಾಗಾಗಿ ವಿದ್ಯಾರ್ಥಿಗಳು ನಿರಂತರವಾಗಿ ಪತ್ರಿಕೆ ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಥಳೀಯ ಪತ್ರಿಕೆ ವಿಜಯನಗರ ವಾಣಿ ಮಾಧ್ಯಮಪಟ್ಟಿಗೆ ಸೇರಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಇದನ್ನು ಪೋಷಿಸಿ ಬೆಳೆಸುವುದು ಸಿರುಗುಪ್ಪದ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿದೆ ಎಂದು ಮಂಜುನಾಥ ಹೇಳಿದರು.


ಲೆಕ್ಕಪರಿಶೋಧಕ ನಾಗನಗೌಡ ಅವರು ಮಾತನಾಡಿ, ಬದುಕು ಸುಧಾರಿಸಲು ಬೇಕಾಗುವ ಸಾಧನ ಎಂದರೆ ಜ್ಞಾನ. ಇದೇ ನಮ್ಮನ್ನು ಜ್ಞಾನರತ್ನರನ್ನಾಗಿಸುತ್ತದೆ ಎಂದು ಹೇಳಿದರು.

ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಲೆಕ್ಕಪರಿಶೋಧಕರ ಸೇವೆ ಅನನ್ಯ ಎಂದರು.

ಪಡೆದ ಜ್ಞಾನ ಏತಕ್ಕೆ ಉಪಯೋಗಿಸಿದೆವು ಎಂಬುದು ಮುಖ್ಯ. ನಮ್ಮ ಜ್ಞಾನ ಸಮಾಜಕ್ಕೆ ದೇಶಕ್ಕೆ ಉಪಯೋಗವಾಗುವಂತಿರಬೇಕು ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ತಾಲೂಕು ಅಧ್ಯಕ್ಷರೂ ಆಗಿರುವ ಮಾಜಿ ಎಎಂಐ ರಾಜ್ಯಾಧ್ಯಕ್ಷ ಡಾ. ಮಧುಸೂಧನ ಕಾರಿಗನೂರು ಅವರು ಮಾತನಾಡಿ, ವೈದ್ಯರು ಮತ್ತು ಪತ್ರಕರ್ತರು ಸಮಾಜಮುಖಿಗಳಾಗಿ ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ನಿರಂತರವಾಗಿ ಶ್ರಮಿಸುತ್ತಾರೆ ಎಂದರು.

ವೈದ್ಯರು ತಮ್ಮಲ್ಲಿ ಬರುವ ರೋಗಿಗಳನ್ನು ಪ್ರೀತಿಯಿಂದ ಕಂಡು ಚಿಕಿತ್ಸೆ ನೀಡಿ ಆರೈಕೆ ಮಾಡಿದರೆ ಇವರ ಸೇವೆಯನ್ನು ಪಡೆಯಲು ನೂರಾರು ಕಿ. ಮೀ. ದೂರದಿಂದ ಬರುತ್ತಾರೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.                                ವಿದ್ಯಾರ್ಥಿಗಳು ಏಕಾಗ್ರತೆ ಹೆಚ್ಚಿಸಿಕೊಳ್ಳಲು  ಮೆದುಳಿಗೆ ವ್ಯಾಯಾಮ ನೀಡುವ ಮಹತ್ವದ ಬಗ್ಗೆ ಮನವರಿಕೆ ಮಾಡಿದರು.

ಪ್ರಸೂತಿ ತಜ್ಞೆ ವೈದ್ಯೆ ಡಾ. ಗಂಗಮ್ಮ ಮಾತನಾಡಿ ಯುವಕರು, ಮಾದಕ ವಸ್ತುಗಳಿಗೆ ಬಲಿಯಾಗದೆ ದುಶ್ಚಟಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.                                                 ಸಾನಿಧ್ಯ ವಹಿಸಿದ್ದ  ಶ್ರೀ ಗುರು ಬಸವ ಮಠದ ಶ್ರೀ ಬಸವ ಭೂಷಣ ಸ್ವಾಮೀಜಿ, ಜೀವರಕ್ಷಕ ವೈದ್ಯ, ಸಮಾಜ ರಕ್ಷಕ ಪತ್ರಕರ್ತ, ದೇಶದ ಅರ್ಥವ್ಯವಸ್ಥೆ ರಕ್ಷಕ ಲೆಕ್ಕಪರಿಶೋಧಕ ಇವರ ಸೇವೆ ಸ್ಮರಣೀಯ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ವಿಜಯನಗರ ವಾಣಿ ಸಂಪಾದಕ ರಮೇಶ ಉಪ್ಪಾರ್ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರು ದಾದಿ ಸತೀಶಬಾಬು, ಕೆಯುಡ್ಬ್ಯುಜೆ ತಾಲೂಕು ಅಧ್ಯಕ್ಷ ಡಿ.‌ಮಾರೆಪ್ಪ ನಾಯಕ, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ  ಅಧ್ಯಕ್ಷ ಡಾ. ಕೆ ಎಂ ಚಂದ್ರಕಾಂತ್, ವಕೀಲರ ಸಂಘದ ಅಧ್ಯಕ್ಷ ಯು. ವೆಂಕೋಬ, ಸಿರುಗುಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಇ.‌ದೊಡ್ಡಯ್ಯ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಕೆ. ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.

ಮಲ್ಲಿಕಾರ್ಜುನ ಸ್ವಾಮಿ ಅವರು ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ನರಹಿಂಹ ಮೂರ್ತಿ ಅವರು ನಿರೂಪಿಸಿದರು. ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಕೆ. ವೆಂಕಟೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published. Required fields are marked *