ಜನಮನ ಸೆಳೆದ ಜಾನಪದ ಸಂಭ್ರಮ: ಎತ್ತಿನ ಬೂದಿಹಾಳ್‌ನಲ್ಲಿ ನೆಲಮೂಲ ಸಂಸ್ಕೃತಿಯ ವೈಭವ ಅನಾವರಣ

ಬಳ್ಳಾರಿ: ಜಿಲ್ಲೆಯ ಎತ್ತಿನ ಬೂದಿಹಾಳ್ ಗ್ರಾಮದ ಶ್ರೀ ಗುರು ಕಟ್ಟೆ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ (ರಿ), ಹಳೇ ದರೋಜಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ಘಟಕ ಯೋಜನೆಯಡಿ ಆಯೋಜಿಸಲಾದ “ಜಾನಪದ ಸಂಭ್ರಮ” ನೆಲಮೂಲ ಸಂಸ್ಕೃತಿ ಅನಾವರಣ ಕಾರ್ಯಕ್ರಮ ಈಚೆಗೆಅದ್ಧೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಳ್ಳಾರಿ ಸಹಾಯಕ ನಿರ್ದೇಶಕರಾದ ಬಿ. ನಾಗರಾಜ ಅವರು ಕಿನ್ನರಿ ವಾದ್ಯ ನುಡಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಜಾನಪದ ಕಲೆಗಳು ನಮ್ಮ ಸಮಾಜದ ಜೀವನ ವಿಧಾನ, ಸಂಸ್ಕೃತಿ, ನಂಬಿಕೆ ಹಾಗೂ ಪರಂಪರೆಯ ಜೀವಂತ ದಾಖಲೆಗಳಾಗಿವೆ ಎಂದು ಹೇಳಿದರು.

ಆಧುನಿಕತೆಯ ಭರಾಟೆಯಲ್ಲಿ ಮರೆಯಾಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಯೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ದೊರೆಯುವುದರ ಜೊತೆಗೆ ಯುವ ಜನಾಂಗದಲ್ಲಿ ಜಾನಪದ ಕಲೆಯ ಬಗ್ಗೆ ಆಸಕ್ತಿ ಮೂಡುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ. ಮಂಜುನಾಥ ಅವರು ಮಾತನಾಡಿ,
ನಾಡೋಜ ಬುರ್ರಕಥಾ ಈರಮ್ಮ ನಾಡು ಕಂಡ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು. ಶಾಲೆ ಮೆಟ್ಟಿಲು ತುಳಿಯದಿದ್ದರೂ ಎರಡು ಲಕ್ಷಕ್ಕಿಂತ ಹೆಚ್ಚು ಪದಗಳು ಇವರ ನಾಲಿಗೆ ಮೇಲೆ ನಲಿಯುತ್ತಿದ್ದವು ಎಂದು ಕೊಂಡಾಡಿದರು.
ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವಾಳವಾಗಿದ್ದು, ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವ ರಾಮು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಜಾನಪದ ಕಲೆಗಳು ಕೇವಲ ಮನರಂಜನೆಯ ಮಾಧ್ಯಮಗಳಲ್ಲ; ಅವು ನಮ್ಮ ಪೂರ್ವಜರ ಬದುಕಿನ ಜ್ಞಾನ, ಸಾಮಾಜಿಕ ಮೌಲ್ಯಗಳು ಹಾಗೂ ಜೀವನ ದರ್ಶನವನ್ನು ಒಳಗೊಂಡಿರುವ ಸಾಂಸ್ಕೃತಿಕ ಸಂಪತ್ತಾಗಿವೆ ಎಂದರು.
ಜಾಗತೀಕರಣ ಮತ್ತು ತಂತ್ರಜ್ಞಾನದ ಯುಗದಲ್ಲಿ ಅನೇಕ ನೆಲಮೂಲ ಕಲಾಪ್ರಕಾರಗಳು ಅಳಿವಿನ ಅಂಚಿನಲ್ಲಿವೆ. ಇಂತಹ ಅಪರೂಪದ ಕಲಾ ಪ್ರಕಾರಗಳನ್ನು ದಾಖಲಿಸಿ, ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಶನ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ತಿಳಿಸಿದರು.

“ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ಜನಪದ ಕಲೆಯ ಬಗ್ಗೆ ಯುವ ಸಮುದಾಯದಲ್ಲಿ ಅರಿವು ಮೂಡಿಸುವುದು ಹಾಗೂ ಜನಪದ ಪರಂಪರೆಯನ್ನು ಜೀವಂತವಾಗಿಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಇಂತಹ ಕಾರ್ಯಕ್ರಮಗಳನ್ನು ಮತ್ತಷ್ಟು ವ್ಯಾಪಕವಾಗಿ ಆಯೋಜಿಸಲಾಗುವುದು” ಎಂದು ಹೇಳಿದರು.

ದರೋಜಿ ಈರಮ್ಮ ನವರ ಸ್ಮಾರಕ ನೆನೆಗುದಿಗೆಯಲ್ಲಿದೆ ಅದನ್ನು ಅಭಿವೃದ್ದಿ ಮಾಡಬೇಕು ಎಂದು ಹೇಳಿದರು.
ಜಾನಪದ ಯುವ ಕಲಾವಿದ ಹುಲುಗಪ್ಪ ಅವರು ಜಾಗೃತಿ ಗೀತೆ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಗ್ರಾಮದ ಮುಖಂಡ, ನಿವೃತ್ತ ಅಧ್ಯಾಪಕ ಚಂದ್ರಯ್ಯ ಸ್ವಾಮಿ ಮಾತನಾಡಿ, “ಇಂತಹ ಪ್ರತಿಭಾವಂತ ಜಾನಪದ ಕಲಾವಿದರು ನಮ್ಮ ಊರಿನಲ್ಲಿ ಪ್ರದರ್ಶನ ನೀಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ” ಎಂದು ಅಭಿಪ್ರಾಯಪಟ್ಟರು.

ಗ್ರಾಮದ ಹಿರಿಯ ಮುಖಂಡ ಚಿದಾನಂದ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಡುತಿನಿ ಮಿರಿಯಾಲ್ ಉಮೇಶ್ ಮತ್ತು ತಂಡ ಜಾನಪದ ಗೀತೆಯೊಂದಿಗೆ ಪ್ರಾರ್ಥನಾ ಗೀತೆ ಹಾಡಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ಮತ್ತು ತಂಡ ವಚನ ಸಂಗೀತ ಗಾಯನದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಶೇಖಪ್ಪ ಕಿನ್ನಾರಿ ಮತ್ತು ತಂಡ ಸುಡುಗಾಡು ಸಿದ್ಧರ ಕೈಚಳಕವನ್ನು ಅಮೋಘವಾಗಿ ಪ್ರದರ್ಶಿಸಿದರೆ, ಹಂಡಿಜೋಗಿಯ ಚಂದ್ರ ಮತ್ತು ತಂಡ ಪಾಂಡವರು ಭಾಗವತ ಕುರಿತು ಮನಮೋಹಕ ಪ್ರದರ್ಶನ ನೀಡಿದರು. ಮೆಟ್ರಿಯ ಸಿ.ಡಿ. ಮೌನೇಶ್ ಮತ್ತು ತಂಡ ತತ್ವಪದಗಳ ಗಾಯನದ ಮೂಲಕ ಜಾನಪದದ ತಾತ್ವಿಕ ಆಯಾಮವನ್ನು ಅನಾವರಣಗೊಳಿಸಿದರು.

ಉತ್ತರೇಶ್ ಸ್ವಾಗತಿಸಿದರು. ಸಾಹಿತಿ ಆಲಂಭಾಷ ನಿರೂಪಿಸಿದರು. ರವಿಚಂದ್ರ ವಂದಿಸಿದರು.
ಈ ಸಂದರ್ಭದಲ್ಲಿ ಕಟ್ಟೆಪ್ಪ, ವೆಂಕಟೇಶ್, ಮಣಿಕಂಠ ಸೇರಿದಂತೆ ಗ್ರಾಮದ ಗಣ್ಯರು, ಕಲಾಭಿಮಾನಿಗಳು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ನೆಲಮೂಲ ಸಂಸ್ಕೃತಿ, ಜಾನಪದ ಕಲೆ ಹಾಗೂ ಗ್ರಾಮೀಣ ಪರಂಪರೆಯ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ವೇದಿಕೆಯಾಗಿದ್ದ ಈ “ಜಾನಪದ ಸಂಭ್ರಮ” ಕಾರ್ಯಕ್ರಮವು ಜನಮನ ಸೆಳೆದು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Reply

Your email address will not be published. Required fields are marked *