ನಾಳೆಯಿಂದ(ಅ.24) ಆರಂಭವಾಗುವ ಎರಡು ದಿನಗಳ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಯಶಸ್ವಿಗೊಳಿಸಲು ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮನವಿ

ಚಾಮರಾಜನಗರ: ಜಿಲ್ಲೆಯಲ್ಲಿ ಅ.24 ಮತ್ತು 25 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನಕ್ಕೆ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ  ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ವರ್ಷ ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿ ಈ ವರ್ಷ ಜಿಲ್ಲೆಯಲ್ಲಿ ಸಮ್ಮೇಳನ ಆಯೋಜಿಸುವ ಸಂಬಂಧ ಧಮ್ಮ ಜ್ಯೋತಿಯನ್ನು ಸ್ವೀಕಾರ ಮಾಡಿದ್ದೆವು. ಅದರಂತೆ ಅ.24 ಮತ್ತು 25 ರಂದು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅರ್ಥಪೂರ್ಣವಾಗಿ ಬೌದ್ಧ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನದ ಯಶಸ್ಸಿಗೆ ಪ್ರತಿಯೊಂದು ಸಮುದಾಯದ ಜನರು ಸಹಕಾರವನ್ನು ನೀಡಬೇಕು ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂಬೇಡ್ಕರ್ ಮೊಮ್ಮಗ ಯಶವಂತ್ ರಾವ್ ಅಂಬೇಡ್ಕರ್, ಹಲವಾರು ಸಚಿವರು ಹಾಗೂ ಇನ್ನಿತರೆ ಗಣ್ಯರು ಭಾಗವಹಿಸಲಿದ್ದಾರೆ.            ಈ ಸಮ್ಮೇಳನದಲ್ಲಿ ಪ್ರತಿಯೊಂದು ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.                      ಮೈಸೂರಿನ ಉರಿಲಿಂಗಪೆದ್ದಿ ಮಠದ ಪೀಠಾಧ್ಯಕ್ಷ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಬೌದ್ಧ ಸಮ್ಮೇಳನಕ್ಕೆ ಹಲವಾರು ದೇಶಗಳಿಂದ ಬೌದ್ಧ ಬಿಕ್ಕುಗಳು ಆಗಮಿಸಲಿದ್ದಾರೆ. ಅದಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸ್ಥಳೀಯ ಆಡಳಿತ ಅಗತ್ಯ ಸಹಕಾರವನ್ನು ನೀಡಬೇಕು ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಬೌದ್ಧ ಸಮ್ಮೇಳನದ ಅಂಗವಾಗಿ ಕೊಳ್ಳೇಗಾಲದಿಂದ ಕಾರ್ಯಕ್ರಮ ನಡೆಯುವ ಜಿಲ್ಲಾ ಕ್ರೀಡಾಂಗಣದವರೆಗೆ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದ ಮುಖ್ಯದ್ವಾರದ ಅನಾವರಣ ಮಾಡಲಾಗುತ್ತಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬೌದ್ಧ ಸಮ್ಮೇಳನ ಆಚರಣಾ ಸಮಿತಿಯ ವೆಂಕಟರಮಣಸ್ವಾಮಿ(ಪಾಪು), ಮಹೇಶ್ ಕುದರ್, ಎನ್‌.ನಾಗಯ್ಯ, ಅಯ್ಯನಪುರ ಶಿವಕುಮಾರ್, ಕಾಗಲವಾಡಿ ಚಂದ್ರು ಇದ್ದರು.

*****

Leave a Reply

Your email address will not be published. Required fields are marked *