ಮಡಿಕೇರಿ ದಸರಾಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆ ಇದೆ: ಶಿವಾನಂದ ತಗಡೂರು

ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಪತ್ರಕರ್ತರ ಕುಟುಂಬಗಳಿಗೆ ನೆರವಾಗಿದ್ದರಿಂದ ಹಿಡಿದು ಇತ್ತೀಚೆಗೆ ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ನೀಡಿಕೆ ತನಕ ತಗಡೂರು ಅವರ ಹೋರಾಟವನ್ನು ವೇದಿಕೆಯಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಿವಾನಂದ ತಗಡೂರು, ಮಡಿಕೇರಿ ದಸರಾ ತನ್ನದೇ ಆದ ವಿಶಿಷ್ಟ ಪರಂಪರೆ, ಸಾಂಸ್ಕೃತಿಕ ವೈಭವ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಜನರ ಉತ್ಸಾಹ, ಸಂಭ್ರಮ ಹಾಗೂ ಸಾಂಸ್ಕೃತಿಕ ಸೊಗಡಿನಿಂದ ಕೂಡಿರುವ ಈ ದಸರಾ ಮಹೋತ್ಸವದಲ್ಲಿ ಭಾಗವಹಿಸಿರುವುದು ಅಪಾರ ಸಂತಸ ತಂದಿದೆ ಎಂದು ಹೇಳಿದರು.

ಮಡಿಕೇರಿ ಕ್ಷೇತ್ರದ ಯುವ ಶಾಸಕ ಡಾ. ಮಂತರ್ ಗೌಡ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಅವರ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಯುವ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರು ತೋರುತ್ತಿರುವ ಕಾಳಜಿ ಅಭಿಮಾನ ಮೂಡಿಸಿದೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಏಷ್ಯಾಡ್ ನಲ್ಲಿ ಚಿನ್ನದ ಪದಕ ವಿಜೇತೆ ಪೂವಮ್ಮ, ಕು.ಸಿಂಚನ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ದೀಪಕ್ ತಮ್ಮಯ ಅವರನ್ನು ದಸರಾ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಡಾ. ಮಂತರ್ ಗೌಡ ದಂಪತಿ, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಸಾಂಸ್ಕೃತಿಕ ಸಂಭ್ರಮದ ನಡುವೆ ನಡೆದ ಸನ್ಮಾನ ಸಮಾರಂಭ ದಸರಾ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿತು.

Leave a Reply

Your email address will not be published. Required fields are marked *