ಏಷ್ಯನ್ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಸುದೀಕ್ಷಾಗೆ ಬಳ್ಳಾರಿ ಜಿಲ್ಲಾಡಳಿತದಿಂದ ಅದ್ಧೂರಿ ಸನ್ಮಾನ

ಬಳ್ಳಾರಿ,ಜು.17: ಏಷ್ಯನ್ ಚಾಂಪಿಯನ್‌ಶಿಪ್ ಅಂಡರ್-23 ಅಥ್ಲೆಟಿಕ್ಸ್ ನ 4×100 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಜಿಲ್ಲೆಯ ಹೆಮ್ಮೆಯ ಪ್ರತಿಭೆ ಸುದೀಕ್ಷಾ ಅವರಿಗೆ ಬಳ್ಳಾರಿ ಜಿಲ್ಲಾಡಳಿತದಿಂದ ಗುರುವಾರ ಹೊಸ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು, ಸುದೀಕ್ಷಾ ಅವರ ಈ ಸಾಧನೆ ಇಡೀ ದೇಶಕ್ಕೆ ಹಾಗೂ ವಿಶೇಷವಾಗಿ ನಮ್ಮ ಬಳ್ಳಾರಿ ಜಿಲ್ಲೆಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ವಿಷಯವಾಗಿದೆ. ಅವರ ಅಪೂರ್ವ ಪ್ರತಿಭೆಯನ್ನು ಗೌರವಿಸುವ ಸಲುವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಇಂದು ಸನ್ಮಾನಿಸಿ, ಜಿಲ್ಲಾ ಕ್ರೀಡಾ ಇಲಾಖೆ ವತಿಯಿಂದ ರೂ.50 ಸಾವಿರ ಚೆಕ್ ಕೂಡ ನೀಡಿ ಉತ್ತೇಜಿಸಲಾಗಿದೆ ಎಂದು ತಿಳಿಸಿದರು.
ಸುದೀಕ್ಷಾ ಅವರು, ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿಯೇ ಶ್ರೀ ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ತಮ್ಮ ಅಥ್ಲೆಟಿಕ್ಸ್ ತರಬೇತಿ ಹಾಗೂ ಸಿದ್ಧತೆಗಳನ್ನು ನಡೆಸಿದ್ದರು ಎಂಬುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಬಳ್ಳಾರಿಯ ಇತರ ಉದಯೋನ್ಮುಖ ಕ್ರೀಡಾ ಪ್ರತಿಭೆಗಳಿಗೆ ಸುದೀಕ್ಷಾ ಅವರು ದೊಡ್ಡ ಮಾದರಿಯಾಗಿದ್ದಾರೆ. ಅವರು ತಮ್ಮ ಜೀವನದಲ್ಲಿ ಇನ್ನೂ ಎತ್ತರದ ಸಾಧನೆಗಳನ್ನು ಮಾಡಲಿ ಹಾಗೂ ಮುಂಬರುವ ದಿನಗಳಲ್ಲಿ ದೇಶಕ್ಕೆ ಒಲಿಂಪಿಕ್ ಪದಕವನ್ನು ತರಲಿ ಎಂದು ಹಾರೈಸಿದರು.


ಸ್ಪಾನ್ಸರ್‌ಶಿಪ್ ಒದಗಿಸಲು ಸಕಾರಾತ್ಮಕ ಭರವಸೆ:
ದೇಶವನ್ನು ಪ್ರತಿನಿಧಿಸುವ ಅಥ್ಲೆಟಿಕ್ಸ್ ಕ್ರೀಡಾಪಟುಗಳು ಕ್ರೀಡಾರಂಗದಲ್ಲಿ ಮತ್ತಷ್ಟು ಸಾಧನೆ ಮಾಡಲು ಮತ್ತು ಆರ್ಥಿಕವಾಗಿ ಸಬಲರಾಗಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ಅಗತ್ಯವಿರುವ ಸ್ಪಾನ್ಸರ್‌ಶಿಪ್ ಮತ್ತು ಅವರು ಆರ್ಥಿಕವಾಗಿ ಮುಂದೆ ಬರಲು ಅಥ್ಲೆಟಿಕ್ಸ್ ನಲ್ಲಿ ಏನೇನು ಅಗತ್ಯತೆಗಳಿವೆಯೋ, ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಎಲ್ಲಾ ರೀತಿಯ ಸಕಾರಾತ್ಮಕ ಕ್ರಮಗಳನ್ನು ಖಂಡಿತವಾಗಿಯೂ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕ್ರೀಡಾಪಟುಗಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಹಾಗೂ ಧನಸಹಾಯವನ್ನು ಒದಗಿಸುವ ಮೂಲಕ ಅವರ ಕ್ರೀಡಾ ವೃತ್ತಿಜೀವನಕ್ಕೆ ಬಲ ತುಂಬುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್. ಎನ್., ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಪೋಷಕರಾದ ಶ್ರೀಧರ್,ಲಲಿತಮ್ಮ ಇದ್ದರು.
*****

 

Leave a Reply

Your email address will not be published. Required fields are marked *