
ಕೊಪ್ಪಳ, ನ.2: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುನಿರಾಬಾದ್ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಜೆ. ಎಸ್. ಅಶ್ವತ್ಥ ಕುಮಾರ ಅವರು ಶನಿವಾರ ಸೇವಾ ವಯೋನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಹೃದಯಸ್ಪರ್ಶಿ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ ಕೊಪ್ಪಳ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ರಾಯಚೂರಿನ ಡಾ.ರಮೇಶ್ ದೊಡ್ಡಮನಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಸೇವಾವಧಿಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಡಾ.ಅಶ್ವತ್ಥ ಕುಮಾರ್ ಅವರು ನಿವೃತ್ತಿಯಾಗುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಕೇಂದ್ರದ ಉಪನಿರ್ದೇಶಕ ಡಾ. ಶಶಿಧರ ಟಿ ಅವರ ನೇತೃತ್ವದಲ್ಲಿ ಡಾ. ಅಶ್ವತ್ಥ ಕುಮಾರ್ ಅವರು, ಡಾ. ದೇಸಾಯಿ, ಡಾ. ರಾಜಶೇಖರ್ ಅವರೊಂದಿಗೆ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಕೇಂದ್ರವು ಎ ಗ್ರೇಡ್ ಗೌರವ ಪಡೆಯುವಲ್ಲಿ ಈ ನಾಲ್ವರ ಶ್ರಮ ಮಹತ್ವದ್ದು, ವಿಶೇಷವಾಗಿ ಡಾ. ಶಶಿಧರ್ ಅವರ ದಕ್ಷ ಸೇವೆಯನ್ನು ಪರಿಚಯಿಸುತ್ತಾ ‘ಬ್ಲಾಕ್ ಗೋಲ್ಡ್’ ಎಂದು ಕೊಂಡಾಡಿದರು. ಡಾ. ಅಶ್ವತ್ಥ ಅವರನ್ನು ಶಾಂತಮೂರ್ತಿ ಎಂದು ಬಣ್ಣಿಸುತ್ತಾ, ತಮಗೆ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ಬೇಸರವಿಲ್ಲದೇ ಕಾರ್ಯನಿರ್ವಹಿಸುತ್ತಿದ್ದರು ಎಂದರು. ಒತ್ತಡದಲ್ಲಿ ಕಾರ್ಯನಿರ್ವಹಿಸುವುದು ಅಧಿಕಾರಿಗಳು ಸಿಬ್ಬಂದಿಗೆ ಸಾಮಾನ್ಯವಾಗುತ್ತಿದೆ. ಒಮ್ಮೆ ಡಾ.ಅಶ್ವತ್ಥ ಅವರು ಕೂಡಾ ಇಂತಹ ಒತ್ತಡವನ್ನು ಎದುರಿಸಿ ಯಶಸ್ವಿಯಾಗಿದ್ದರು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ, ಬಳ್ಳಾರಿ ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ ಮಾತನಾಡಿ, ಸರಕಾರಿ ಅಧಿಕಾರಿಗಳಾಗಿದ್ದ ಡಾ. ಅಶ್ವತ್ಥ ಕುಮಾರ್ ಅವರ ಸಾಮಾಜಿಕ ಬದ್ಧತೆ, ನೊಂದವರ ಬಗ್ಗೆ ಕಾಳಜಿ ಅನನ್ಯ. ವೃತ್ತಿಗೆ ತೊಡಕಾಗದಂತೆ ಪ್ರವೃತ್ತಿಯ ಮೂಲಕ ಉತ್ತಮ ಸಮಾಜ ಸೇವೆ ಸಲ್ಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇವರ ಪತ್ರಿಕಾ ಅಂಕಣಗಳು, ಲೇಖನಗಳು, ಪುಸ್ತಕಗಳು ಸಾವಿರಾರು ನೊಂದವರಿಗೆ ಪ್ರೇರಣೆಯಾಗಿವೆ. ಇವರ ಆಪ್ತ ಸಮಾಲೋಚನೆಯ ಲಾಭ ಪಡೆದ ಹಲವು ವಿಶೇಷ ಚೇತನರು, ಸಂತ್ರಸ್ತರು ಜೀವನದಲ್ಲಿ ಯಶಸ್ವಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.
ಸಮಾಜಮುಖಿ ಡಾ.ಅಶ್ವಥ ಕುಮಾರ್ ಅವರು ಸರಕಾರಿ ಸೇವೆಯಿಂದ ಮಾತ್ರ ನಿವೃತ್ತಿ ಪಡೆದಿದ್ದಾರೆ. ವಿಶ್ರಾಂತ ಜೀವನ ನೊಂದವರ, ದೀನ ದಲಿತರ, ವಿಶೇಷ ಚೇತನರ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ತಿಳಿಸಿದರು.
ಬರವಣಿಗೆ, ಚಿತ್ರಕಲೆ, ಫೋಟೊಗ್ರಫಿ ಮತ್ತು ಸಮಾಜಸೇವೆಯಲ್ಲಿ ಸದಾ ಸಂತಸ ಕಾಣುತ್ತಿರುವ ಬಹುಮುಖಿ ಡಾ. ಅಶ್ವತ್ಥ ಕುಮಾರ್ ಅವರ ಭಾವನಾತ್ಮಕ ಬದುಕು ಮತ್ತು ಅಶ್ವತ್ಥ ಮರ ಎರಡು ಕೃತಿಗಳನ್ನು ಸಂಸ್ಕೃತಿ ಪ್ರಕಾಶನ ಹೆಮ್ಮೆಯಿಂದ ಪ್ರಕಟಿಸಿದೆ ಎಂದು ಹೇಳಿದರು.

ಪದವಿ ತರಗತಿಯ ಸಹಪಾಠಿ ಡಾ. ವೆಂಕನಗೌಡ ಮಾತನಾಡಿ, ಡಾ. ಅಶ್ವತ್ಥ್ ಅವರು ಅತಿ ಸ್ನೇಹಜೀವಿ, ಸಂಘ ಜೀವಿ ಎಂದರು.
ನಿವೃತ್ತ ಜಿಲ್ಲಾ ಖಜಾನಾ ಅಧಿಕಾರಿ ಡಾ. ವೆಂಕಟೇಶ ಮೂರ್ತಿ ಅವರು ಮಾತನಾಡಿ, ಮೂಕ ಪ್ರಾಣಿಗಳ ಸೇವೆ ಮಾಡುವ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಪುಣ್ಯದ ಕೆಲಸ ಮಾತ್ರವಲ್ಲ ಭಗವಂತನ ಸೇವೆ ಎಂದು ತಿಳಿಸಿದರು. ಡಾ.ಅಶ್ವತ್ಥ ಕುಮಾರ ಅವರು ಅಶ್ವತ್ಥ ಮರ. ಇಬ್ಬರ ಸ್ನೇಹ ಲಭಿಸಿದ್ದು ನನ್ಮ ಪುಣ್ಯ ಎಂದರು.

ಬಳ್ಳಾರಿಯ ನಿವೃತ್ತ ಉಪ ನಿರ್ದೇಶಕ ಡಾ.ಸೋಮಶೇಖರ್ ಅವರು ಮಾತನಾಡಿ, ಡಾ. ಅಶ್ವತ್ಥ ಅವರದು ಸ್ನೇಹಮಯಿ ವ್ಯಕ್ತಿತ್ವ. ಸೂಕ್ಷ್ಮ ಮತಿ, ಇವರ ಬರವಣಿಗೆಯಲ್ಲಿ ಅಬ್ಬರವಿಲ್ಲ. ಆಡಂಬರವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಶಿವರಾಜ್ ಮಾತನಾಡಿ, ಡಾ. ಅಶ್ವತ್ಥ ಅವರ ಮಾನಸಿಕ ಆಪ್ತ ಸಮಾಲೋಚನೆಯಿಂದ ಬಹಳಷ್ಟು ಜನರಿಗೆ ಉಪಯೋಗ ಆಗಿದೆ ಎಂದರು.

ಡಾ. ಬಸವರಾಜ ಬೆಣ್ಣಿ ಅವರು ಡಾ.ಅಶ್ವತ್ಥ ಅವರನ್ನು ಅಜಾತಶತ್ರು, ಪರಿಶುದ್ಧ ವ್ಯಕ್ತಿ ಎಂದು ಬಣ್ಣಿಸಿದರು.
ಧಾರವಾಡದ ಡಾ. ಜೆಂಡಿ ಮಾತನಾಡಿ, ಅಕ್ಷರಕ್ಕೂ ಮೀರಿದ ವ್ಯಕ್ತಿತ್ವ, ಬಹಳ ಮಂದಿಗೆ ಸಹಾಯ ಮಾಡಿದ್ದಾರೆ ಎಂದರು.
ಡಾ. ಎಸ್ ಎಸ್ ಪಾಟೀಲ್ ಅವರು, ಡಾ. ಅಶ್ವತ್ಥ ಅವರಿಂದ ಮತ್ತಷ್ಟು ಉತ್ತಮ ಕೃತಿಗಳು ಪ್ರಕಟವಾಗಲಿ ಎಂದು ಆಶಿಸಿದರು. ಇವರ ವ್ಯಕ್ತಿತ್ವ ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಿವೆ ಎಂದರು.
ಸಂಘದ ಅಧ್ಯಕ್ಷ ತಿಪ್ಪಣ್ಣ ತಳಕಲ್ ಅವರು, ಡಾ. ಅಶ್ವತ್ಥ ಕುಮಾರ್ ಅವರು ನೊಂದವರಿಗೆ ಸಹಾಯಹಸ್ತ ನೀಡಿದ್ದಾರೆ. ಪ್ರವೃತ್ತಿಯಾಗಿ ಮಾಡಿದ ಯಶಸ್ವಿ ಜನಸೇವೆ ಇತರರಿಗೆ ಮಾದರಿ ಎಂದು ಹೇಳಿದರು.

ಪತ್ನಿ ರೇಖಾ ಅಶ್ವತ್ಥ ಕುಮಾರ್ ಅವರು, ನಮ್ಮ ಮನೆಯವರ ಜನಮುಖಿ ಕಾರ್ಯಗಳನ್ನು ಎಲ್ಲರೂ ಬಣ್ಣಿಸುವುದನ್ನು ಕಂಡು ಮನದುಂಬಿ ಬಂತು. ಇವರ ಸಮಾಜಸೇವೆ ಕಾರ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡಬೇಕಿತ್ತು ಎಂದು ಗದ್ಗಿತರಾದರು.
ಸಿಬ್ಬಂದಿ ಪ್ರಾಣೇಶ್ ಆಚಾರ್, ಶರಣಪ್ಪ, ಕುಟುಂಬದ ನಾಗೇಶ್, ಪುತ್ರ ಅರ್ಚಿತ್ ಮತ್ತಿತರರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಉಪ ನಿರ್ದೇಶಕ ಡಾ. ಶಶಿಧರ್ ಟಿ ಮತ್ತು ಡಾ. ಅಶ್ವತ್ಥ ಕುಮಾರ್ ಅವರು ಮಾತನಾಡಿದರು.
ನಿವೃತ್ತ ಡಿಡಿ ಡಾ.ಕುಮಾರ್, ಹಿರಿಯ ಪಶುವೈದ್ಯಾಧಿಕಾರಿಗಳಾದ ಬಳ್ಳಾರಿಯ ಡಾ. ಎ.ಮಂಜುನಾಥ, ಡಾ. ನಾಗರಾಜ್, ಡಾ. ಕೆ. ಆರ್. ಶ್ರೀನಿವಾಸ್, ಡಾ. ವಲಿ, ಡಾ. ಮಲ್ಲಿಕಾರ್ಜುನ ಪಾಟೀಲ್, ಕೊಪ್ಪಳ, ವಿಜಯನಗರ, ಧಾರವಾಡ, ಬಳ್ಳಾರಿ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರದ ಡಾ. ರಾಜಶೇಖರ್ ಸ್ವಾಗತಿಸಿದರು. ನಿವೃತ್ತ ಸಹಾಯಕ ನಿರ್ದೇಶಕ ಡಾ. ಬಸವರಾಜ ಬೆಣ್ಣಿ ಅವರು ನಿರೂಪಿಸಿ, ವಂದಿಸಿದರು.
*****
