ಅಲೆಮಾರಿ ಸಮುದಾಯಗಳ ಬದುಕಿನ ವಾಸ್ತವ ಅರಿಯಲು ಮೋಕ‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪ್ರಯತ್ನ: ಗಮನಸೆಳೆದ ಸಮಾಜಶಾಸ್ತ್ರೀಯ ಕ್ಷೇತ್ರಕಾರ್ಯ ಅಧ್ಯಯನ

ಬಳ್ಳಾರಿ, ಅ.30: ತಾಲೂಕಿನ ಮೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ (IQAC) ಸಹಯೋಗದಲ್ಲಿ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗಾಗಿ ‘ತರಗತಿಯಿಂದ ಕ್ಷೇತ್ರಕಾರ್ಯದತ್ತ – ಸಮಾಜವನ್ನು ಅರಿಯುವ ಸಮಾಜಶಾಸ್ತ್ರೀಯ ಪಯಣ’ ಎಂಬ ವಿಶೇಷ ಕಾರ್ಯಕ್ರಮದಡಿ ಶುಕ್ರವಾರ ಮೋಕ ಗ್ರಾಮದ ಅಲೆಮಾರಿ ಸಮುದಾಯಗಳ ನೆಲೆಗಳಿಗೆ ಕ್ಷೇತ್ರಕಾರ್ಯ ಅಧ್ಯಯನ ಭೇಟಿ ಗಮನ ಸೆಳೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ  ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಿ. ಸರೋಜಾ ಪಾಟೀಲ್ ಅವರು, ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ಸಮಾಜಶಾಸ್ತ್ರೀಯ ಪರಿಕಲ್ಪನೆಗಳನ್ನು ಸಮಾಜದ ನೈಜ ಪರಿಸ್ಥಿತಿಗಳೊಂದಿಗೆ ಹೋಲಿಕೆ ಮಾಡಿ ಅರ್ಥಮಾಡಿಕೊಳ್ಳಲು ಕ್ಷೇತ್ರಕಾರ್ಯ ಅಧ್ಯಯನ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.  ಸಮಾಜದ ಅಂಚಿನಲ್ಲಿರುವ ಅಲೆಮಾರಿ ಸಮುದಾಯಗಳ ಜೀವನಮಟ್ಟ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ನೇರವಾಗಿ ಅರಿತುಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಮಾನವೀಯ ಮೌಲ್ಯಗಳು ಮತ್ತು ಸಂವೇದನಾಶೀಲ ಮನೋಭಾವ ಬೆಳೆಯುತ್ತವೆ ಎಂದರು.                                                 ಇಂತಹ ಅಧ್ಯಯನಗಳು ವಿದ್ಯಾರ್ಥಿಗಳಲ್ಲಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ಬೆಳೆಸುತ್ತವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ, ಸಮಾನ ಅವಕಾಶ ಮತ್ತು ಗೌರವಯುತ ಜೀವನ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರಕಾರ್ಯ ಅಧ್ಯಯನದ ಸಂದರ್ಭದಲ್ಲಿ ಮೋಕ ಗ್ರಾಮದಲ್ಲಿ ಕಳೆದ ಸುಮಾರು 25 ವರ್ಷಗಳಿಂದ ನೆಲೆಸಿರುವ ಹಂಡಿ ಜೋಗಿ, ಬುಡುಗ ಜಂಗಮ ಹಾಗೂ ಬುಡಬುಡಿಕೆ ಸಮುದಾಯಗಳ ಬದುಕಿನ ಸ್ಥಿತಿಗತಿಗಳನ್ನು ವಿದ್ಯಾರ್ಥಿಗಳು ನೇರವಾಗಿ ಅಧ್ಯಯನ ಮಾಡಿದರು. ಈ ಸಮುದಾಯಗಳಿಗೆ ಸೇರಿದ ಸುಮಾರು 40 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಇಂದಿಗೂ ಅನೇಕ ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ಕಂಡುಬಂದಿತು.

ಈ ಸಮುದಾಯದ ಅನೇಕ ಕುಟುಂಬಗಳಿಗೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಜಾತಿ ಪ್ರಮಾಣ ಪತ್ರಗಳಂತಹ ಅಗತ್ಯ ದಾಖಲೆಗಳು ಇಲ್ಲದಿರುವುದರಿಂದ ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳು ಸೇರಿದಂತೆ ಹಲವು ಜನಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಎಸ್‌ಐಆರ್ (SIR) ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಚುನಾವಣಾ ಗುರುತಿನ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಅವರು ಸಂಕಷ್ಟ ಎದುರಿಸುತ್ತಿದ್ದಾರೆ.

ಮಕ್ಕಳ ಶಿಕ್ಷಣದ ವಿಚಾರದಲ್ಲಿಯೂ ಈ ಕುಟುಂಬಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಅಂಗನವಾಡಿ ಕೇಂದ್ರವಾಗಲಿ, ಶಾಲೆಯಾಗಲಿ ಅಥವಾ ಟೆಂಟ್ ಶಾಲೆಯಂತಹ ತಾತ್ಕಾಲಿಕ ಶಿಕ್ಷಣ ವ್ಯವಸ್ಥೆಯಾಗಲಿ ಸಮರ್ಪಕವಾಗಿ ಲಭ್ಯವಿಲ್ಲದಿರುವುದು ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ವಸತಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಈ ಕುಟುಂಬಗಳು ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಬದುಕುತ್ತಿರುವುದು ಕ್ಷೇತ್ರ ಅಧ್ಯಯನದ ವೇಳೆ ಗಮನಕ್ಕೆ ಬಂದಿತು.

ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ಅಶ್ವ ರಾಮು ಅವರು ಮಾತನಾಡಿ, ಸಮಾಜದ ಕಟ್ಟಕಡೆಯ ಅಂಚಿನಲ್ಲಿರುವ ಅಲೆಮಾರಿ ಸಮುದಾಯಗಳ ಬದುಕಿನ ವಾಸ್ತವ ಸ್ಥಿತಿಯನ್ನು ಅರಿಯುವುದು ಸಮಾಜಶಾಸ್ತ್ರೀಯ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.                  ಮೋಕ ಗ್ರಾಮದಲ್ಲಿ ಸುಮಾರು 25 ವರ್ಷಗಳಿಂದ ನೆಲೆಸಿರುವ 40 ಕುಟುಂಬಗಳು ಇಂದಿಗೂ ಗುರುತಿನ ದಾಖಲೆಗಳು, ಶಿಕ್ಷಣ, ವಸತಿ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.                                       ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕು. ಜಿಲ್ಲಾಡಳಿತ, ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಈ ಕುಟುಂಬಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ದಾಖಲೆಗಳನ್ನು ಒದಗಿಸುವುದರ ಜೊತೆಗೆ ಶಿಕ್ಷಣ, ವಸತಿ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಅಲೆಮಾರಿ ಸಮುದಾಯಗಳಿಗೂ ಗೌರವಯುತ ಬದುಕು ಹಾಗೂ ಸಾಮಾಜಿಕ ನ್ಯಾಯ ದೊರಕುವಂತಾಗಬೇಕು ಎಂದು ಡಾ. ಅಶ್ವ ರಾಮು  ಒತ್ತಾಯಿಸಿದರು.

ಈ ಕ್ಷೇತ್ರಕಾರ್ಯ ಅಧ್ಯಯನವು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನವನ್ನು ಮೀರಿ ಸಮಾಜದ ನೈಜ ಸಮಸ್ಯೆಗಳನ್ನು ನೇರವಾಗಿ ಅರಿಯಲು, ಸಾಮಾಜಿಕ ಅಸಮಾನತೆ, ಅವಕಾಶಗಳ ವಂಚನೆ ಹಾಗೂ ಅಂಚಿನ ಸಮುದಾಯಗಳ ಬದುಕಿನ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು ಎಂದು ವಿವರಿಸಿದರು.

ಸಮಾಜವನ್ನು ಕೇವಲ ತರಗತಿಯಲ್ಲಿ ಓದುವುದಲ್ಲ, ಸಮಾಜದ ನಡುವೆ ಹೋಗಿ ಅದರ ವಾಸ್ತವಿಕತೆಯನ್ನು ಅರಿಯುವುದೇ ನಿಜವಾದ ಸಮಾಜಶಾಸ್ತ್ರೀಯ ಅಧ್ಯಯನ ಎಂಬ ಆಶಯದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು ಎಂದರು.

ಈ ಸಂದರ್ಭದಲ್ಲಿ ಐಕ್ಯೂಎಸಿ ಸಮಿತಿಯ ಸಂಚಾಲಕರಾದ ಡಾ. ಕಲಾವತಿ ಬಿ.ಜಿ., ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೋಮಶೇಖರ ಎಂ., ಅತಿಥಿ ಉಪನ್ಯಾಸಕರಾದ ಡಾ. ಬಸವರಾಜ ಟಿ., ಡಾ. ವೇಷ್ಗಾರು ರಾಮಾಂಜನೇಯ, ಡಾ. ದಸ್ತಗಿರಿ ಸಾಹೇಬ, ಬಸವರಾಜ ಮಲಗಾಣ, ಬಸವರಾಜ ಮಾಟೂರು, ಧನರಾಜು, ಸಂತೋಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *