ಬಳ್ಳಾರಿ,ಅ.29: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ ನ. 1 ರಿಂದ 7 ರವರೆಗೆ ಒಂದು ವಾರಗಳ ಕಾಲ ಕಡ್ಡಾಯವಾಗಿ ಕನ್ನಡ ಚಲನಚಿತ್ರಗಳನ್ನೇ ಪ್ರದರ್ಶಿಸಬೇಕೆಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯ ತೀರ್ಮಾನದಂತೆ ಈ ಆದೇಶ ಹೊರಡಿಸಲಾಗಿದೆ. ‘ಕರ್ನಾಟಕ ಸಿನಿಮಾಸ್ (ರೆಗ್ಯುಲೇಶನ್) ರೂಲ್ಸ್ 1971’ರ ನಿಯಮ 7-ಎ ಅನ್ವಯ ಜಿಲ್ಲೆಯ ಎಲ್ಲಾ ಕಾಯಂ, ಅರೆ-ಕಾಯಂ, ತಾತ್ಕಾಲಿಕ ಚಿತ್ರಮಂದಿರಗಳು ಹಾಗೂ ವಿಡಿಯೋ ಚಿತ್ರಮಂದಿರಗಳಲ್ಲಿ ನವೆಂಬರ್ 1 ರಿಂದ 7 ರವರೆಗೆ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕು.
ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ, ಒಂದು ವಾರ ಕನ್ನಡ ಚಿತ್ರ ಪ್ರದರ್ಶಿಸದಿದ್ದಲ್ಲಿ ಅಂತಹ ಚಿತ್ರಮಂದಿರಗಳ ಪರವಾನಗಿಯನ್ನು (ಲೈಸೆನ್ಸ್) ನವೀಕರಿಸುವುದಿಲ್ಲ.
ಜೊತೆಗೆ, ಪ್ರತಿ ವರ್ಷದಂತೆ ಈ ಬಾರಿಯೂ ಚಿತ್ರಮಂದಿರಗಳ ಮಾಲಿಕರು ಅ.31 ಮತ್ತು ನವೆಂಬರ್ 1 ರಂದು ಚಿತ್ರಮಂದಿರಗಳಿಗೆ ಕಡ್ಡಾಯವಾಗಿ ದೀಪಾಲಂಕಾರ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———
