
ಬಳ್ಳಾರಿ, ನ.6: ಬಾಲಕಿಯರಲ್ಲಿ ಆತ್ಮವಿಶ್ವಾಸ, ಧೈರ್ಯ ಹಾಗೂ ಆತ್ಮರಕ್ಷಣಾ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ‘ನಾರಿ ಶಕ್ತಿ-ರಾಜ್ಯಮಟ್ಟದ ಬಾಲಕಿಯರ ಕರಾಟೆ ಪಂದ್ಯಾವಳಿ-2026’ ಯನ್ನು ನ.29 ರಂದು ಆಯೋಜಿಸಲಾಗಿದೆ ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಟ್ಟೇಸ್ವಾಮಿ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಂದ್ಯಾವಳಿ ಭಾನುವಾರ(ನ.29) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ನಗರದ ಅಲ್ಲಿಪುರ, ಹೊಸಪೇಟೆ ರಸ್ತೆಯಲ್ಲಿರುವ ಬಳ್ಳಾರಿ ರೆಸಿಡೆನ್ಸಿಯಲ್ ಸ್ಕೂಲ್ ಆ್ಯಂಡ್ ಕಾಲೇಜಿನ ಆವರಣದ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆಯಲಿದೆ.ಹೆಚ್ಚಿನ ಮಾಹಿತಿಗಾಗಿ
ಮೊಹಮ್ಮದ್ ನದೀಮ್: 9986080450 ಮತ್ತು
ಕಟ್ಟೆ ಸ್ವಾಮಿ: 9731481118 ಸಂಪರ್ಕಿಸಲು ಅವರು ಕೋರಿದರು.
ರಾಜ್ಯ ಕರಾಟೆ ಶಿಕ್ಷಕರ ಸಂಘದ ಸದಸ್ಯತ್ವ ಹೊಂದಿರುವ ಸುಮಾರು 27 ಜಿಲ್ಲೆಗಳು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಸುಮಾರು 700ರಿಂದ 800 ವಿದ್ಯಾರ್ಥಿನಿಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ವಯೋಮಿತಿ ಮತ್ತು ತೂಕದ ಆಧಾರದ ಮೇಲೆ ಕಟಾ (Kata) ಹಾಗೂ ಕುಮಿಟೆ (Kumite) ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವುದು, ಬಾಲಕಿಯರಲ್ಲಿ ಆತ್ಮರಕ್ಷಣಾ ಕೌಶಲ್ಯ ಬೆಳೆಸುವುದು ಹಾಗೂ ಕರಾಟೆ ಕ್ರೀಡೆಯಲ್ಲಿ ಅವರ ಪ್ರತಿಭೆಗೆ ರಾಜ್ಯಮಟ್ಟದ ವೇದಿಕೆ ಕಲ್ಪಿಸುವುದು ಈ ಪಂದ್ಯಾವಳಿಯ ಪ್ರಮುಖ ಉದ್ದೇಶವಾಗಿದೆ ಎಂದು ಕಟ್ಟೆಸ್ವಾಮಿ ವಿವರಿಸಿದರು.

ರಾಜ್ಯ ಕರಾಟೆ ಶಿಕ್ಷಕರ ಸಂಘ (ರಿ.), ಕರಾಟೆ ಕರ್ನಾಟಕ ಹಾಗೂ ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ (ರಿ.) ಇವರ ಸಂಯುಕ್ತ ಆಶ್ರಯದಲ್ಲಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಮೊಹಮ್ಮದ್ ನದೀಮ್, ಬಳ್ಳಾರಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ರಾಜ್ಯ ಉಪಾಧ್ಯಕ್ಷ ಮೌನೇಶ್ ವಡ್ಡಟ್ಟಿ, ರಾಜ್ಯ ಖಜಾಂಚಿ ಶಿವಕುಮಾರ್ ಶಾರದಲ್ಲಿ, ರಾಜ್ಯ ಸಹ ಕಾರ್ಯದರ್ಶಿ ಪ್ರಕಾಶ್ ಉಜಿನಿಕೊಪ್ಪ, ರಾಜ್ಯ ತಾಂತ್ರಿಕ ನಿರ್ದೇಶಕ ರವಿ ಕೋಟ್ಯಾನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
