i could understand what she said. i felt that i am not even an amateur…
ಇಲ್ಲಿಯೂ ಕಪ್ಪು ಮೋಡಗಳು
ಜೋಲುಮುಖ ಹಾಕಿ
ಮಂಕುಹಿಡಿದವರಂತೆ ತೇಲಾಡುತ್ತಿವೆ, ಮಳೆಯಿಲ್ಲ,
ಬರಿ ಗಾಳಿ, ಎಂದು
ಹೇಳಿ, ನಕ್ಕಳು. ಅವಳ
ಮಾತಿನ ಹಿಂದೆ
ಏನೋ ಒಂದು ಇರುವುದರ ವಾಸನೆ ಹಿಡಿದ
ಮನಸ್ಸು, ಮುಗುಳ್ನಗುವ
ಅವಳ ಮುಖವನ್ನು ಕಲ್ಪಿಸಿ-
ಕೊಳ್ಳುತ್ತಿರುವಾಗಲೇ,
ಅವಳು ಹೇಳಿದಳು, ಒಂದು ಪ್ರಶ್ನೆ ಕೇಳಬಹುದಾ?
ಮಳೆ ಬರಬಹುದು, ಎಂದು
ನಾನು ಅಂದದ್ದನ್ನು ಅವಳು ಕೇಳಿಸಿಕೊಳ್ಳಲೇ ಇಲ್ಲ.
ಸಣ್ಣಸಣ್ಣ ಸಂಗತಿಗಳನ್ನ ನೀವು ಚೆನ್ನಾಗಿ ಗ್ರಹಿಸುತ್ತೀರೆಂದು
ಎಲ್ಲರೂ ಸುಮ್ಮನೆ ಹೊಗಳುತ್ತಾರೆ.
ಹೇಳಿ, ನೋಡುವಾ-
ಒಂದು ಇಲಿ
ಬೆಕ್ಕಿನ ಜೊತೆ ಯಾಕೆ ಇರುವುದಿಲ್ಲ,
ಯಾಕೆ ಅದು, ತನ್ನ ಕೊನೇ
ಆಟ ಆಡ್ತಿದೀನಿ ಅಂದುಕೊಂಡು
ಅತ್ತ ಇತ್ತ ಓಡುತ್ತೆ,
ತಪ್ಪಿಸಿಕೊಳ್ಳುತ್ತೆ, ಕಣ್ಣಾಮುಚ್ಚಾಲೆ ಆಟ ಆಡುತ್ತೆ?
ಮಳೆ ಬಂದರೆ ಬರಲಿ
ಮಳೆ ಬಾರದೆ
ಇದ್ದರೆ, ನನಗೇನು ಎಂದು ಕೊಂಡವನು,
ಮಳೆಗಾಗಿ ಪ್ರಾರ್ಥಿಸಿದೆ.
ಯಾವ ಕ್ಷಣದಲ್ಲು ಮಳೆ ಸುರಿಯಬಹುದು
ಬೆಕ್ಕು ಇಲಿಯನ್ನು ಹಿಡಿಯಬಹುದು.

-ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು
