ಅನುದಿನ ಕವನ-೨೦೨೧, ಕವಿ: ಎ.ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಬಂಡಲ್ ಬಡಾಯಿ ರಾಜನಿಗೆ..!

“ದೀಪಾವಳಿ ಹಬ್ಬದ ಲಕ್ಷ್ಮಿಪೂಜೆ ಸಂಭ್ರಮದ ಹಾರ್ದಿಕ ಶುಭಕಾಮನೆಗಳೊಂದಿಗೆ ಹಾಗೆ ಒಂದು ಪಟಾಕಿ ಪದ್ಯ.. ಚಿತ್ತ ಚಿತ್ತಾರವಾಗಿಸುವ ಚಮಕ್ಕು ಗಿಮಿಕ್ಕು ಭಾವಭಾಷ್ಯ. ತರಲೆ ತಮಾಷೆಗಳ ತುಂಟಕಾವ್ಯ. ಇಲ್ಲಿ LOGIC ಹುಡುಕಬೇಡಿ.. ಹಾಸ್ಯ ಲಾಸ್ಯಗಳ MAGIC ನಲ್ಲಿ ಮುದವಾಗಿ ಮೈಮರೆತು ನಕ್ಕುಬಿಡಿ.. ಅಕ್ಕಪಕ್ಕದವರಿಗೂ ಹಂಚಿ ನಗಿಸಿಬಿಡಿ..”

-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.                     *****

ಬಂಡಲ್ ಬಡಾಯಿ ರಾಜನಿಗೆ..!

ಬರೀ ಮಾತಿನ ಪಟಾಕಿ ಹಚ್ಚಿ
ಪಟಾಯಿಸ ಬೇಡ್ವೋ..
ಕಿವಿ ಮೇಲೆ ಹೂಕುಂಡ ಹಚ್ಚಿ
ಮರ ಹತ್ತಿಸ ಬೇಡ್ವೋ..

ತುಂಟನಗೆಯ ಮತಾಪು ಹಚ್ಚಿ
ನಕ್ಷತ್ರ ಜಾರಿಸ ಬೇಡ್ವೋ..
ಕಂಗಳಲ್ಲೇ ಬಾಣಬಿರಿಸು ಹಚ್ಚಿ
ಎದೆಗೆ ಬೆಂಕಿ ಹಾಕಬೇಡ್ವೋ..

ಸುಳ್ಳಿನ ಸುರ್ ಸುರಬತ್ತಿ ಹಚ್ಚಿ
ಕಲರುಕಾಗೆ ಹಾರಿಸಬೇಡ್ವೋ..
ಭಾರಿ ಬಿಲ್ಡಪ್ಪಿನ ಭೂಚಕ್ರ ಹಚ್ಚಿ
ಸುಮ್ಮನೆ ಯಾಮರಿಸಬೇಡ್ವೋ..

ಚಟ್ ಪಟ್ ಚಿನಕುರಳಿ ಚಚ್ಚಿ
ಚಿತ್ತವ ಚಿತ್ತಾಗಿಸ ಬೇಡ್ವೋ
ಬಂಡಲ್ ಬಡಾಯಿಗಳ ಕೊಚ್ಚಿ
ಬುಡಕ್ಕೆ ಬಾಂಬಿಡ ಬೇಡ್ವೋ..

ಬಣ್ಣಬಣ್ಣದ ಆಕಾಶಬುಟ್ಟಿ ಹಚ್ಚಿ
ಕಾಮನಬಿಲ್ಲು ಕಾಣಿಸಬೇಡ್ವೋ
ಅಂಗೈಯಲ್ಲೇ‌ ಅರಮನೆ ಬಚ್ಚಿ
ಬೆಟ್ಟಕ್ಕೆ ಚಿನ್ನದೇಣಿ ಹಾಕಬೇಡ್ವೋ

ಹುಸಿ ಭರವಸೆಯ ಬೆಲ್ಲ ಹಚ್ಚಿ
ಭ್ರಮೆ ಹೋಳಿಗೆ ತಿನ್ನಿಸಬೇಡ್ವೋ.
ಮಾತಲ್ಲೆ ಮುಡಿಗೆ ಮಲ್ಲಿಗೆ ಹಚ್ಚಿ
ನಿಂತಲ್ಲೆ ನಾಕ ತೋರಿಸಬೇಡ್ವೋ.

ಲಕ್ಷ್ಮಿ ಪೂಜೆಯದೇ ನೆಪ ಹಚ್ಚಿ
ಲಾಟರಿ ಹೊಡಿ ಬೇಡ್ವೋ..
ದೀಪ ಹಚ್ಚಿ ನೆನಪುಗಳ ಬಿಚ್ಚಿ..
ಬಗೆಬಗೆ ಬ್ಯಾಟರಿ ಬಿಡಬ್ಯಾಡ್ವೋ..!

ದೀಪಾವಳಿಹಬ್ಬ ಸಬೂಬು ಹಚ್ಚಿ
ಮನೆಬಳಿ ಅಡ್ಡಾಡ ಬೇಡ್ವೋ
ಮಿಂಚಿನಂತೆ ಆಟ ನೋಟ ಬಿಚ್ಚಿ
ಮನ ಸೆಳೆಸೆಳೆದು ಕಾಡ ಬೇಡ್ವೋ..

-ಎ.ಎನ್.ರಮೇಶ್. ಗುಬ್ಬಿ.

Leave a Reply

Your email address will not be published. Required fields are marked *