ನೀನಿಲ್ಲದೆ ಹಚ್ಚಲಾರೆನು ಹಣತೆ!
ಬಾಗಿಲಲಿ ತೋರಣವಿದೆ ಅಂಗಳದಿ ರಂಗೋಲಿಯಿದೆ
ನಿನ್ನ ಹೆಜ್ಜೆಯ ಸದ್ದಿಲ್ಲದೆ ಹಬ್ಬದ ಕಳೆಯಿಲ್ಲ!
ಮುಗಿಲ ತುಂಬ ನಕ್ಷತ್ರಗಳ ಮೆರವಣಿಗೆಯಿದೆ
ನಿನ್ನ ನಗುವಿಲ್ಲದೆ ಮನೆಯಲ್ಲಿ ಬೆಳಕಿಲ್ಲ!
ಒಲವಿನ ಒಡತಿಯೇ ಒಮ್ಮೆ ಬಂದುಬಿಡು ಮನೆಗೆ
ನೀನಿಲ್ಲದೆ ಹಚ್ಚಲಾರೆನು ಹಣತೆ!
ಮಲ್ಲಿಗೆಯ ಹೂವಿದೆ ಮಧುರವಾದ ಪರಿಮಳವಿದೆ
ಮುಡಿಯಲಿ ಮುಡಿಸುವೆ ನಿನ್ನ ಮುದ್ದು ನೋಟವಿಲ್ಲ!
ಮಾತಿಗೆ ಕಾಯುವ ತುಟಿಗಳಿವೆ ಮೌನದ ಕಣ್ಣುಗಳಿವೆ
ಮನದ ಮಾತುಗಳ ಕೇಳುವ ನಿನ್ನ ಸಂಗವಿಲ್ಲ!
ಒಲವ ಭಾಷೆಯಲಿ ಮನದ ಕದ ತೆರೆಯಲು ಬಾ
ನೀನಿಲ್ಲದೆ ಹಚ್ಚಲಾರೆನು ಹಣತೆ!
ಅಮಾವಾಸ್ಯೆ ಕಳೆದು ಹುಣ್ಣಿಮೆಯು ಬಂದಾಗಿದೆ
ನನ್ನ ಮನದ ಆಗಸದಿ ಇನ್ನೂ ಕತ್ತಲೆಯೆಲ್ಲ!
ಹಣತೆಯ ಸಾಲು ಸಾಲು ಹೊಸ್ತಿಲಲಿ ಬೆಳಗಿದೆ
ನಿನ್ನ ನೆನಪಿನ ಜ್ವಾಲೆಯೇ ಎದೆಯಲಿ ಉರಿದಿದೆಯೆಲ್ಲ!
ಚಂದಿರನ ಬೆಳಕಾಗಿ ಚಂದದಿ ಮನಕೆ ಬಂದುಬಿಡು
ನೀನಿಲ್ಲದೆ ಹಚ್ಚಲಾರೆನು ಹಣತೆ!
ಸಿಹಿಯ ತಿನಿಸುಗಳಿವೆ ಹಬ್ಬದ ಅಡುಗೆಯಿದೆ
ನಿನ್ನ ಕೈತುತ್ತಿನ ರುಚಿಯೇ ಎಲ್ಲಿಯೂ ಸಿಗದಲ್ಲ!
ಸಡಗರ ಸಂಭ್ರಮವಿದೆ ಬಂಧು ಬಳಗವಿದೆ
ನಿನ್ನೊಂದಿಗಿರುವ ಕ್ಷಣಗಳ ಮಧುರತೆಯಿಲ್ಲಿಲ್ಲ!
ಒಲವಿನ ಸವಿಯ ಹಂಚಲು ಓಡೋಡಿ ಬಂದುಬಿಡು
ನೀನಿಲ್ಲದೆ ಹಚ್ಚಲಾರೆನು ಹಣತೆ!
ಪಟಾಕಿಗಳ ಸದ್ದಿದೆ ಸಂಭ್ರಮದ ಕುಣಿತ ಹಾಡಿದೆ
ನಿನ್ನೆಜ್ಜೆ ಗೆಜ್ಜೆಯ ನಾದದಷ್ಟು ಇಂಪಿಲ್ಲ!
ಬಣ್ಣಗಳ ಬೆಳಕಿದೆ ಬಾನಿನ ಚಿತ್ತಾರವಿದೆ
ನಿನ್ನ ಕಣ್ಣ ಹೊಳಪಿನಷ್ಟು ಕಾಂತಿಯಿಲ್ಲ!
ನನ್ನ ಬದುಕಿನ ದೀಪಕ್ಕೆ ಬತ್ತಿಯಾಗಿ ಬಂದುಬಿಡು
ನೀನಿಲ್ಲದೆ ಹಚ್ಚಲಾರೆನು ಹಣತೆ!
ಹಳೆಯ ಮುನಿಸು ಬಿಡು ಹೊಸ ಒಲವ ತೊಡು
ಮೌನದ ಮುಸುಕ ಸರಿಸಿ ಮನದ ಮಾತಾಡು!
ದೂರದ ದಾರಿಗಳ ಬಿಟ್ಟು ಹತ್ತಿರಕೆ ನಡೆದು ಬಾ
ಕಾಯುವ ಹೃದಯದ ಕದವೊಮ್ಮೆ ತಟ್ಟಿ ನೋಡು!
ನನ್ನೆಲ್ಲ ದೀಪಾವಳಿಯ ಸೊಗಸಾಗಿ ನೀನಿದ್ದುಬಿಡು
ನೀನಿಲ್ಲದೆ ಹಚ್ಚಲಾರೆನು ಹಣತೆ!
ಹಣತೆಗೊಂದು ನೆಲೆಯಿದೆ ಬತ್ತಿಗೊಂದು ಬೆಳಕಿದೆ
ಪರ್ವಕ್ಕೊಂದು ಗುರಿಯಿದೆ ಕಾಲಕ್ಕೊಂದು ಅರ್ಥವಿದೆ!
ನನ್ನ ಬದುಕಿಗೊಂದು ಒಲವಿದೆ ಒಲವಧಾರೆ ನೀನಾಗಿರೆ!
ಪ್ರತಿದಿನವು ದೀಪಾವಳಿ ನೀನಿರಲು ನನ್ನ ಪಾಲಿಗೆ
ಬಾ ಒಲವೇ ನೀನಿಲ್ಲದೆ ಹಚ್ಚಲಾರೆನು ಹಣತೆ!
ಬಾ ಮನವೇ ನೀನಿಲ್ಲದೆ ಹಚ್ಚಲಾರೆನು ಹಣತೆ!

-ಟಿ.ಪಿ.ಉಮೇಶ್, ಹೊಳಲ್ಕೆರೆ
