ಹಣತೆ ಹಚ್ಚುತ್ತೇನೆ
ಪ್ರೀತಿಯ ಪ್ರಣತಿಗೆ
ತಾಳ್ಮೆ ತೈಲವನೆರೆದು,
ಅಹಮ್ಮಿಕೆಯ ಬತ್ತಿಗೆ
ಅವಿವೇಕದ ಕಡ್ಡಿ ಕೊರೆದು
ಹಚ್ಚುತ್ತೇನೆ ಹಣತೆ ನಾನು
ಬೆಳಕು ಕಾಣುವ ಭರವಸೆಗೆ.
ಹೃದಯದಂಗಳದಿ ತುಂಬಿದ
ದ್ವೇಷ ಮತ್ಸರದ ಕಸ ಗುಡಿಸಿ,
ಅನುರಾಗದ ನೀರ ಸಿಂಪಡಿಸಿ,
ರಾಗ ರಂಗಿನ ರಂಗೋಲಿ ಬಿಡಿಸಿ,
ಹಚ್ಚುತ್ತೇನೆ ಹಣತೆ ನಾನು
ಕಾರ್ತೀಕದ ಪಾವನ ಕನಸಿಗೆ.
ಕೊಳೆಯ ನರಕವ ತೊಳೆದು,
ಬಡಿವಾರದ ಬಣ್ಣವ ಕಳೆದು,
ಪಾಡ್ಯದ ಪವಿತ್ರ ಜಲದಿ ಮಿಂದು
ಮಾಲಿನ್ಯ ಮನವ ಶುಚಿಗೊಳಿಸಿ,
ಹಚ್ಚುತ್ತೇನೆ ಹಣತೆಯ ನಾನು
ದೀಪಾವಳಿಯ ನವಬೆಳಗಿಗೆ.
ಮೌಢ್ಯದ ಮತಾಪುಗಳಬ್ಬರದಿ
ಮೌಲ್ಯಗಳು ಮೌನವಾಗದಿರಲಿ;
ಸ್ವಾರ್ಥದ ಡಿಜಿ ಶಬ್ದದಬ್ಬರಕೆ
ನಿಸ್ವಾರ್ಥ ನಿಶ್ಯಬ್ದವಾಗದಿರಲೆಂದು
ಹಚ್ಚುತ್ತೇನೆ ಮನಜ ಮತದ ದೀಪ
ಅದುವೇ ವಿಶ್ವಪಥಕೆ ದಾರಿದೀಪ!

-ಎ.ಎಂ.ಪಿ. ವೀರೇಶಸ್ವಾಮಿ
ಹೊಳಗುಂದಿ
