ಆರು ವರ್ಷಗಳ ಅಕ್ಷರಯಾನ… ಓದುಗರ ಪ್ರೀತಿಯೇ ನಮ್ಮ ಶಕ್ತಿ!

ಡಿಜಿಟಲ್ ಜಗತ್ತಿನಲ್ಲಿ ಕನ್ನಡದ ಕಂಪು ಹರಡುತ್ತಿರುವ ಕರ್ನಾಟಕ ಕಹಳೆ ಡಾಟ್ ಕಾಮ್ಗೆ ಇಂದು(29-11-2026) ಆರು ವರ್ಷಗಳ ಸಂಭ್ರಮ.
29-11-2020ರಂದು ಆರಂಭಗೊಂಡ ಕರ್ನಾಟಕ ಕಹಳೆ ಡಾಟ್ ಕಾಮ್ ಇಂದು ಆರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಈ ಆರು ವರ್ಷಗಳ ಪಯಣವನ್ನು ಹಿಂತಿರುಗಿ ನೋಡಿದಾಗ ಸಂತೃಪ್ತಿ, ಸಾರ್ಥಕತೆ ಮತ್ತು ಹೊಸ ಜವಾಬ್ದಾರಿಯ ಅರಿವು ಒಟ್ಟೊಟ್ಟಿಗೆ ಮೂಡುತ್ತವೆ.
ಬಳ್ಳಾರಿ ವಲಯದ ಅಂದಿನ ಪೊಲೀಸ್ ಮಹಾನಿರೀಕ್ಷಕರು, ಪ್ರಸ್ತುತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿರುವ, ಸಂಶೋಧಕರು ಹಾಗೂ ಲೇಖಕರೂ ಆದ ಶ್ರೀ ಎಂ. ನಂಜುಂಡಸ್ವಾಮಿ(ಮನಂ) ಅವರು ನಮ್ಮ ಜಾಲತಾಣಕ್ಕೆ ಚಾಲನೆ ನೀಡುವ ಮೂಲಕ ಈ ಅಕ್ಷರಯಾನಕ್ಕೆ ಮುನ್ನುಡಿ ಬರೆದಿದ್ದರು. ಅಂದು ಆರಂಭವಾದ ಈ ಪ್ರಯತ್ನ ಇಂದು ಸುಮಾರು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ದಾಖಲಿಸಿರುವುದು ನಮ್ಮ ಪಾಲಿನ ಮಹತ್ವದ ಸಾಧನೆ.

ಪತ್ರಿಕೋದ್ಯಮದ ಆಶಯ ಕೇವಲ ಸುದ್ದಿಗಳನ್ನು ಪ್ರಕಟಿಸುವುದಷ್ಟೇ ಅಲ್ಲ; ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವುದು, ಸೃಜನಶೀಲ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು ಮತ್ತು ಜನರ ಧ್ವನಿಗೆ ವೇದಿಕೆಯಾಗುವುದೂ ಆಗಿದೆ. ಈ ಆಶಯದೊಂದಿಗೆ ಮುನ್ನಡೆಯುತ್ತಿರುವ ಕರ್ನಾಟಕ ಕಹಳೆ ಡಾಟ್ ಕಾಮ್, ಪ್ರಚಲಿತ ವಿದ್ಯಮಾನಗಳು, ಪ್ರಮುಖ ಸುದ್ದಿಗಳು, ವಿಶೇಷ ವರದಿಗಳು ಹಾಗೂ ಸುದ್ದಿಛಾಯಾಚಿತ್ರಗಳ ಮೂಲಕ ಓದುಗರ ಗಮನ ಸೆಳೆಯುತ್ತಿದೆ.
ನಮ್ಮ ಜಾಲತಾಣದ ಜನಪ್ರಿಯ ಅಂಕಣಗಳಲ್ಲಿ ಪ್ರಮುಖವಾದದ್ದು ‘ಅನುದಿನ ಕವನ’. ಸಾಹಿತ್ಯ ಮತ್ತು ಕಾವ್ಯಕ್ಕೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ಆರಂಭಿಸಿದ ಈ ಅಂಕಣ ಇಂದು ಕವಿಗಳು ಹಾಗೂ ಕಾವ್ಯಪ್ರಿಯರ ಮೆಚ್ಚಿನ ವೇದಿಕೆಯಾಗಿ ಬೆಳೆದಿದೆ. ಈವರೆಗೆ 2030ಕ್ಕೂ ಹೆಚ್ಚು ಕವಿತೆಗಳು ನಿರಂತರವಾಗಿ ಪ್ರಕಟವಾಗಿರುವುದು ನಿಜಕ್ಕೂ ಸಂಭ್ರಮದ ಸಂಗತಿ. ನಾಡಿನ ವಿವಿಧ ಭಾಗಗಳ ಕವಿಗಳಿಗೆ ತಮ್ಮ ಕಾವ್ಯಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿರುವುದು ಈ ಅಂಕಣದ ವಿಶೇಷತೆ. ಹೊಸಬರು, ಹಿರಿಯರು ಎನ್ನುವ ಭೇದವಿಲ್ಲದೆ ಕವಿತೆಗಳಿಗೆ ವೇದಿಕೆ ಒದಗಿಸುತ್ತಿರುವುದು ನಮ್ಮ ಸಾಹಿತ್ಯಿಕ ಬದ್ಧತೆಗೆ ಸಾಕ್ಷಿಯಾಗಿದೆ.

ಜಾಹೀರಾತುಗಳಿಲ್ಲದ ಆರು ವರ್ಷಗಳ ಅಕ್ಷರಸೇವೆ!
ಈ ಆರು ವರ್ಷಗಳ ಪಯಣದಲ್ಲಿ ನಮ್ಮ ಪಾಲಿಗೆ ಮತ್ತೊಂದು ವಿಶೇಷ ಸಂತೃಪ್ತಿಯ ಸಂಗತಿಯಿದೆ. ಕರ್ನಾಟಕ ಕಹಳೆ ಡಾಟ್ ಕಾಮ್ನಲ್ಲಿ ಈವರೆಗೆ ಒಂದೇ ಒಂದು ಜಾಹೀರಾತನ್ನೂ ಪ್ರಕಟಿಸಿಲ್ಲ. ಯಾವುದೇ ವಾಣಿಜ್ಯ ಉದ್ದೇಶ ಅಥವಾ ಜಾಹೀರಾತಿನ ಆದಾಯದ ನಿರೀಕ್ಷೆಯಿಲ್ಲದೆ, ಕೇವಲ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪತ್ರಿಕೋದ್ಯಮದ ಮೇಲಿನ ಪ್ರೀತಿಯಿಂದ ಓದುಗರಿಗೆ ಮಾಹಿತಿ, ಸುದ್ದಿ, ಸುದ್ದಿಛಾಯಾಚಿತ್ರಗಳು ಮತ್ತು ಫೋಟೊ ಕವಿತೆಗಳನ್ನು ನಿರಂತರವಾಗಿ ತಲುಪಿಸುತ್ತಾ ಬಂದಿದ್ದೇವೆ. ಇದರಿಂದ ನಮಗೆ ದೊರೆತಿರುವ ಆತ್ಮತೃಪ್ತಿ ಅನನ್ಯವಾದುದು.
ಆದರೆ, ಯಾವುದೇ ಒಂದು ಉತ್ತಮ ಪ್ರಯತ್ನ ನಿರಂತರವಾಗಿ ಮುನ್ನಡೆಯಲು ಓದುಗರ ಪ್ರೋತ್ಸಾಹ ಮತ್ತು ಹಿತೈಷಿಗಳ ಸಹಕಾರವೂ ಅಗತ್ಯ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ನ ಬೆಳವಣಿಗೆ ಮತ್ತು ನಿರಂತರತೆಯನ್ನು ಬಯಸುವ ಹಿತೈಷಿಗಳು ಹಾಗೂ ಓದುಗ ಬಾಂಧವರು ತಮ್ಮ ಇಷ್ಟಾನುಸಾರ ತನು, ಮನ, ಧನದ ಮೂಲಕ ಬೆಂಬಲಿಸಬಹುದು. ಇದು ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು, ನಿಮ್ಮ ಪ್ರೀತಿ ಮತ್ತು ಸಹಕಾರವೇ ನಮಗೆ ದೊಡ್ಡ ಪ್ರೋತ್ಸಾಹವಾಗಲಿದೆ.
ಒಂದು ಜಾಲತಾಣದ ಯಶಸ್ಸನ್ನು ಕೇವಲ ವೀಕ್ಷಣೆಗಳ ಸಂಖ್ಯೆಯಿಂದ ಅಳೆಯಲಾಗದು. ಅದು ಓದುಗರ ಮನಸ್ಸಿನಲ್ಲಿ ಎಷ್ಟು ವಿಶ್ವಾಸ ಮೂಡಿಸಿದೆ, ಎಷ್ಟು ಜನರ ಅಭಿವ್ಯಕ್ತಿಗೆ ವೇದಿಕೆಯಾಗಿದೆ, ಸಮಾಜದೊಂದಿಗೆ ಎಷ್ಟು ಪರಿಣಾಮಕಾರಿಯಾಗಿ ಸಂವಹನ ನಡೆಸಿದೆ ಎಂಬುದರಲ್ಲಿಯೂ ಅದರ ನಿಜವಾದ ಯಶಸ್ಸು ಅಡಗಿದೆ. ಆ ದೃಷ್ಟಿಯಿಂದ ಕರ್ನಾಟಕ ಕಹಳೆ ಡಾಟ್ ಕಾಮ್ನ ಆರು ವರ್ಷಗಳ ಪಯಣ ನಮಗೆ ಆತ್ಮವಿಶ್ವಾಸ ನೀಡಿದೆ.
ಈ ಸಾಧನೆಯ ಹಿಂದೆ ಕವಿಗಳು, ಸಾಹಿತಿಗಳು, ಲೇಖಕರು, ಸುದ್ದಿ ಮೂಲಗಳು, ಹಿತೈಷಿಗಳು ಹಾಗೂ ನಿರಂತರವಾಗಿ ನಮ್ಮ ಪ್ರಕಟಣೆಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಸಹೃದಯ ಓದುಗರಿದ್ದಾರೆ. ಅವರೆಲ್ಲರ ಪ್ರೀತಿ, ವಿಶ್ವಾಸ ಮತ್ತು ಸಹಕಾರವೇ ನಮ್ಮ ಅಕ್ಷರಯಾನದ ನಿಜವಾದ ಬಂಡವಾಳ.
ಡಿಜಿಟಲ್ ಮಾಧ್ಯಮಗಳ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದರ ಜೊತೆಗೆ ಪತ್ರಿಕೋದ್ಯಮದ ಮೂಲ ಆಶಯಗಳಾದ ಸತ್ಯ, ನಿಷ್ಠೆ, ವಸ್ತುನಿಷ್ಠತೆ ಮತ್ತು ಸಾಮಾಜಿಕ ಬದ್ಧತೆಯನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಗುಣಮಟ್ಟದ ಸುದ್ದಿಗಳು, ವೈವಿಧ್ಯಮಯ ಸಾಹಿತ್ಯಿಕ ಬರಹಗಳು, ಚಿಂತನಶೀಲ ಲೇಖನಗಳು ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು ನಮ್ಮ ಮುಂದಿನ ಆದ್ಯತೆಯಾಗಲಿದೆ.
ಆರು ವರ್ಷಗಳ ಈ ಸಂಭ್ರಮ ನಮ್ಮ ಪಾಲಿಗೆ ಕೇವಲ ಮೈಲಿಗಲ್ಲಲ್ಲ; ಮುಂದಿನ ಪಯಣಕ್ಕೆ ಸ್ಫೂರ್ತಿ ನೀಡುವ ಹೊಸ ಆರಂಭವೂ ಹೌದು. ಓದುಗರ ವಿಶ್ವಾಸವನ್ನು ಉಳಿಸಿಕೊಂಡು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜದ ಆಶಯಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ಮತ್ತಷ್ಟು ಕ್ರಿಯಾಶೀಲವಾಗಿ ಮುನ್ನಡೆಯಲಿದೆ.
ನಮ್ಮ ಕಹಳೆ ಮೊಳಗುವುದು ಸುದ್ದಿಗಾಗಿ ಮಾತ್ರವಲ್ಲ; ಕನ್ನಡದ ಅಕ್ಷರಗಳ ಕಂಪು, ಕವಿತೆಗಳ ಭಾವಲೋಕ ಮತ್ತು ಸಮಾಜದ ಸಕಾರಾತ್ಮಕ ಚಿಂತನೆಗಳಿಗಾಗಿ ಕೂಡ.
ಆರು ವರ್ಷಗಳ ಈ ಅಕ್ಷರಯಾನದಲ್ಲಿ ಕೈಜೋಡಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ಓದುಗರ ಪ್ರೀತಿಯೇ ನಮ್ಮ ಶಕ್ತಿ… ಕನ್ನಡದ ಕಂಪೇ ನಮ್ಮ ಸಂಕಲ್ಪ!

-ಸಿ.ಮಂಜುನಾಥ MA(journalism),B.com, D.jour(LLB) ಸಂಪಾದಕರು: karnatakakahale.com

I’m Iranna B Hukkeri,Web Designer(WebOnline Technologies 8970783999) of this news website. I am very happy to have C. Manjunath sir as our prominent client. All the very best sir.