ಅಮ್ಮನಿಗೆ
ಬೇಡಮ್ಮ ಬೇಡ
ನೀರು ನೆರಳಿಲ್ಲದೆ ನನ್ನ ಒಣಗಿಸ ಬೇಡ
ಆಕಾಶದಗಲಕ್ಕು ನಿನ್ನ ಸೆರಗು ನೆರಿ ಹರಡಿ
ಬಿಸಿಲ ಮರೆಸಿ ಬದುಕಿನ ಹಸಿರ ಬಿಳಿಚಿಸಬೇಡ
ಒಂದಿಷ್ಟು ಬೆಳಕು ಬಿಡು
ನಿನ್ನ ಹಿತವಾದ ನೆರಳಲ್ಲಿ
ಬಿಸಿಲ ಕಾಸುತ್ತೇನೆ.
ಅರಿಸಿನ-ಕುಂಕುಮ ಹೂಮುಡಿದ
ಅಂಗಳದ ಗಿಡವ ಪ್ರದಕ್ಷಿಸಿ
ರಂಗೋಲಿ ಬರೆದು ಕೈಲಾಸ ಕಂಡು
ಬಾಗಿಲ ಮರೆಯಲ್ಲಿ ನಿಂತು
ಗಾಳಿ ಬೆಳಕಿಲ್ಲದೆ ಹೆಣವಾಗಲು
ಅನೀಮಿಯ ರೋಗಿಯಾಗಲು
ನಿನ್ನ ದಮ್ಮಯ್ಯ ನನ್ನ ಕೈಲಾಗೋದಿಲ್ಲ
ಗಾಳಿಗುದುರೆ ಹತ್ತಿ ಸವಾರಿ ಹೊರಟಾಗ
ನಿನ್ನಂಥ ಅಮ್ಮದಿರು ನನ್ನಂಥ ಪಡ್ಡೆಗಳ
ಕಿವಿಯಲ್ಲಿ ಲಾಗಾಯ್ತಿನಿಂದ ಊದಿದ
ಪಾತಿವ್ರತ್ಯದ ಪುಂಗಿ ನೀನೂ ಊದಬೇಡ
ಈಗ ತಾನೆ ಹೆಡೆಯಾಡಿಸುತ್ತಿದ್ದೇನೆ
ಯಾರನ್ನಾದರೂ ಕಚ್ಚಿ ವಿಷವಿಳಿಸಿಕೊಳ್ಳುತ್ತೇನೆ ಬಿಡು.
ನೀ ಹಾಕಿರುವ ಅಣೆಕಟ್ಟೆ ಒಡೆದು ಬಿರುಮಳೆಗೆ ಸೊಕ್ಕಿ ಭೋರ್ಗರೆದು ನುಗ್ಗಿ-ನೀನಿಟ್ಟ ಎಲ್ಲ ಅಡೆ-ತಡೆ ಕಿತ್ತು ನಿನ್ನಂತಾಗದೆ ಬದುಕುತ್ತೇನೆ ನನಗೆ ದಾರಿ ಬಿಡು

-ಸ.ಉಷಾ, ಶಿವಮೊಗ್ಗ
[ಇಂದು (ನ.28) ಬೆಂಗಳೂರಿನಲ್ಲಿ ನಿಧನರಾದ ಹಿರಿಯ ಲೇಖಕಿ ಸ. ಉಷಾ ಮೊದಲನೆಯ ಎಂ ಎ ವಿದ್ಯಾರ್ಥಿನಿಯಾಗಿದ್ದಾಗ ಅವರ ಈ ‘ಅಮ್ಮನಿಗೆ’ ಕವನ ಸುಧಾಕರ, ಸಿಪಿಕೆ ಮತ್ತು ಜೀಶಂಪ ಅವರು ಸಂಪಾದಿಸುತ್ತಿದ್ದ ‘ಪರಂಪರೆ’ಯ ಮೊದಲ ಸಂಚಿಕೆಯಲ್ಲಿ (ಜನವರಿ 1972) ಪ್ರಕಟಗೊಂಡಿತ್ತು.]
***** ‘ಅಮ್ಮನಿಗೆ’ ಕವನ ಪ್ರಕಟಿಸುವ ಮೂಲಕ ಹಿರಿಯಲೇಖಕಿ ಸ. ಉಷಾ ಅವರಿಗೆ ಕರ್ನಾಟಕ ಕಹಳೆ ಡಾಟ್ ಕಾಂ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದೆ.
(ಸಂಪಾದಕರು)
