ಅನುದಿನ ಕವನ-೧೨೨೨, ಕವಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು, ಕವನದ ಶೀರ್ಷಿಕೆ: ಕತ್ತಲಾಗಿಸು ಪ್ರಭುವೇ

ಕತ್ತಲಾಗಿಸು ಪ್ರಭುವೇ

ಪ್ರಭುವೇ,
ಇನ್ನಾದರೂ ಹೊರಗೆ ಕತ್ತಲಾಗಿಸು
ಈ ಬೆಳಕು ದಾರಿ ತೋರಿಸಿದ್ದು ಸಾಕು.
ನಡೆದೂ ನಡೆದೂ ಸುಸ್ತಾಗಿದ್ದೇನೆ,
ದಾರಿ ಗುರಿಗಳ ನಡುವೆ ಸಾಗುವಲ್ಲಿ
ಸಾಧನೆಗಳ ಮಿಂಚುಳದ ಬೆಳಕಿನಲ್ಲಿ
ದಾಹ ತೀರದ ಚಪ್ಪಾಳೆಯಲ್ಲಿ
ನಾನಿಲ್ಲದಂತೆ ಬಂಧಿಯಾಗಿದ್ದೇನೆ.

ನಿದ್ದೆ ಮತ್ತು ಎಚ್ಚರದ ನಡುವಿನ
ಸ್ಥಿತಿಯೊಂದು ಮೂರ್ತವಾದ ಹಾಗೆ
ಬದುಕು ಎರಡು ಕೊನೆಗಳ ನಡುವೆ
ಸಿಲುಕಿ ಇಲ್ಲವಾದ ಹಾಗೆ,
ಇರುವ ಸ್ಥಿತಿಯಲ್ಲಿ ಕಣ್ಣು ಮುಚ್ಚಲಾಗದಷ್ಟು
ಬದುಕು ಬಟ್ಟಬಯಲಾಗಿದೆ.

ನಗುವ ಧರಿಸಿ ಸುಮ್ಮನೆ ಒಟ್ಟಿಗಿದ್ದದ್ದು ಸಾಕು
ಕೆಳಗಿಳಿಸಿಬಿಡು ಈ ಹೆಗಲ ಭಾರ
ದೂರ ಮಾಡಿಸು; ಕಳಚಿಕೊಳ್ಳುತ್ತೇನೆ.
ಸಾಕಿನ್ನು ಒಣ ಮಾತಿನ ಉಪಚಾರ;
ನನಗೆ ನಾನೊಂದಿಷ್ಟು ಹತ್ತಿರವಾಗುತ್ತೇನೆ.
ದೂರುತ್ತಿರಲಿ ಜಗತ್ತು ಈ ಪಲಾಯನಕ್ಕೆ;
ನನ್ನ ಕಾಲ ಕೆಳಗಿನ ಮಣ್ಣು ಬಗೆದಷ್ಟು
ಇನ್ನೂ ಆಳವಾಗಿ ಬೇರೂರುತ್ತೇನೆ.

ಕತ್ತಲಾಗಿಸು ಪ್ರಭುವೇ
ಈ ಜಗತ್ತು ಮತ್ತೆ ಎಚ್ಚರಗೊಳ್ಳುತ್ತಿದೆ.
ಕಣ್ಣು ಮುಚ್ಚಿಕೊಳ್ಳುತ್ತೇನೆ
ಈ ಬೆಳಕು ದಾರಿ ತಪ್ಪಿಸುತ್ತಿದೆ.

-ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು
—-