ಅನುದಿನ‌ ಕವನ-೧೩೨೨, ಪ್ರಸಿದ್ಧ ಕವಿ: ಶಂ.ಗು.ಬಿರಾದಾರ, ಕವನದ ಶೀರ್ಷಿಕೆ: ನಮ್ಮ ಕನಸು

🍀🌺🍀💐 ಕರ್ನಾಟಕ‌ಕಹಳೆ ಡಾಟ್ ಕಾಮ್ ನ ಎಲ್ಲಾ‌ ಸಹೃದಯ ಓದುಗ ಬಂಧುಗಳಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🍀🌺🍀💐

ನಮ್ಮ ಕನಸು

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೆ ನಾಡ ಹಿರಿಯರು
ನಮ್ಮ ಕನಸದು ಸುಂದರ

ಹಿಂದೂ ಮುಸ್ಲಿಂ
ಕ್ರೈಸ್ತರೆಲ್ಲರಿಗೊಂದೆ ಭಾರತ ಮಂದಿರ
ಶಾಂತಿದಾತನು ಗಾಂಧಿತಾತನು
ಎದೆಯ ಬಾನಿನ ಚಂದಿರ

ಜಾತಿರೋಗದ ಭೀತಿ ಕಳೆಯುವ
ನೀತಿ ಮಾರ್ಗದಿ ನಡೆವೆವು
ಒಂದೇ ಮಾನವ ಕುಲವು ಎನುತ
ವಿಶ್ವ ಧರ್ಮವ ಪಡೆವೆವು

ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು
ದೇಶಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡುವೆವು

ನಮ್ಮ ಸುತ್ತಲು ಹೆಣೆದುಕೊಳ್ಳಲಿ
ಸ್ನೇಹ ಪಾಶದ ಬಂಧನ
ಬೆಳಕು ಬೀರಲಿ,ಗಂಧ ಹರಡಲಿ
ಉರಿದು ಪ್ರೇಮದ ಚಂದನ

ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ
ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿಕೊಳ್ಳಲು
ಭೂಮಿ ತನ್ನ ಕಂದನ

– ಪ್ರಸಿದ್ಧ ಕವಿ ಶಂ.ಗು.ಬಿರಾದಾರ

Leave a Reply

Your email address will not be published. Required fields are marked *