ಬಳ್ಳಾರಿ, ಜು. 1: ಸರಳಾದೇವಿ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಗತಿಯಲ್ಲಿ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ವಯೋ ನಿವೃತ್ತಿ ಹೊಂದುತ್ತಿರುವ ಡಾ.ಸಿ.ಎಚ್. ಸೋಮನಾಥ್ ಅವರ ಪಾತ್ರ ಅನನ್ಯ ಎಂದು ಹೊಸಪೇಟೆಯ ಎಸ್ ಎಸ್ ಎ ಎಸ್ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ದೇವಣ್ಣ ಅವರು ತಿಳಿಸಿದರು.
ಕಾಲೇಜು ಅಧ್ಯಾಪಕರ ಸಂಘದ ವತಿಯಿಂದ ಸಭಾಂಗಣದಲ್ಲಿ ವಯೋನಿವೃತ್ತಿ ಹೊಂದಿದ ಪ್ರಾಚಾರ್ಯ ಡಾ.ಸಿ ಎಚ್ ಸೋಮನಾಥ್ ಅವರಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿಗಳೊಂದಿಗೆ ಸದಾ ಉತ್ತಮ ಒಡನಾಟವಿಟ್ಟುಕೊಂಡು ಕಾಲೇಜಿನಲ್ಲಿ ಶಿಸ್ತು ತರಲು ಶ್ರಮಿಸಿದವರು.ಎಂದು ಹೇಳಿದರು.
ಪದವಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕ ಹುದ್ದೆಗಳು ಪೂರ್ಣಕಾಲಿಕವಾಗಿ ಖಾಯಂಮಾತಿಯಾಗಲು ಹೋರಾಟಗಾರ ಡಾ.ಸೋಮನಾಥ್ ಅವರು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
1991ರಲ್ಲಿ ಸರಳಾದೇವಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇರಿ ಸಹಾಯಕ, ಸಹ ಹಾಗೂ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ನಿವೃತ್ತಿ ಹೊಂದುತ್ತಿರುವುದು ದಾಖಲೆಯೇ ಸರಿ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿಯಲ್ಲಿ ಇವರ ಪಾತ್ರ ಮಹತ್ತರವಾಗಿದೆ. ದಶಕಗಳ ಕಾಲ ಸಹೋದ್ಯೋಗಿಯಾಗಿ ಹತ್ತಿರದಿಂದ ಗಮನಿಸಿರುವಂತೆ
ಮೇಲ್ನೋಟಕ್ಕೆ ಕೋಪಿಷ್ಟರಂತೆ ಕಂಡರೂ ಅಂತರಂಗದಲ್ಲಿ ತಾಯ್ತನವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕುರುಗೋಡು ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಹೆಚ್. ರಾಮಕೃಷ್ಣ ಅವರು ಮಾತನಾಡಿ, ಕುರುಗೋಡು ಕಾಲೇಜಿನಲ್ಲಿಯೂ ಡಾ.ಸೋಮನಾಥ್ ಅವರು ಉತ್ತಮ ಸೇವೆ ಸಲ್ಲಿಸುವ ಮೂಲಕ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಿದ್ದಾರೆ. ಸದಾ ಸಮಾಜಮುಖಿ ಯೋಚಿಸುವ ಇವರು ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ಜಾಣ್ಮೆ, ಉತ್ತಮ ಆಡಳಿತಗಾರನ ಗುಣವಿದೆ ಎಂದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಹುಚ್ಚುಸಾಬ್ ಅವರು ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚುವ ಇವರು ಬಹಳ ಜನರಿಗೆ ಸಹಾಯ ಮಾಡಿದ್ದನ್ನು ಗಮನಿಸಿದ್ದೇನೆ. ಸಹೃದಯಿಯಾಗಿದ್ದು ನೊಂದವರ ಪರವಾಗಿರುತ್ತಾರೆ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಪ್ರೊ. ನಾರಾಯಣಪ್ಪಅವರು ಮಾತನಾಡಿ 1989ರಿಂದ ಒಡನಾಟವಿರುವ ಡಾ.ಸೋಮನಾಥ್ ಅವರಿಗೆ ಯಾವುದೇ ಜವಾಬ್ದಾರಿ ನೀಡಿದರು ತಮ್ಮ ಸ್ವಂತ ಕೆಲಸವೆಂಬಂತೆ ನಿಭಾಯಿಸುವುದನ್ನು ಸಹೋದ್ಯೋಗಿಯಾಗಿ ಕಂಡಿದ್ದೇನೆ. ಅನ್ಯಾಯ, ತಪ್ಪುಗಳನ್ನು ಮುಲಾಜಿಲ್ಲದೇ ಖಂಡಿಸುವ ಗುಣ ಹೊಂದಿದ್ದಾರೆ ಎಂದರು.
ನಗರದ ಸರಕಾರಿ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ರಾಘುವಲು ಅವರು ಮಾತನಾಡಿ ಡಾ.ಸೋಮನಾಥ್ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು ಎಂದರು.
ಕಾಲೇಜಿನ ಪರೀಕ್ಷಾ ನಿಯಂತ್ರಕರಾದ ಡಾ. ಶೋಭರಾಣಿ ಅವರು, ಸಮಯಪ್ರಜ್ಞೆ, ಶಿಸ್ತಿನ ವ್ಯಕ್ತಿತ್ವದ ಡಾ. ಸೋಮನಾಥ ಅವರು ಎರಡು ತಿಂಗಳಕಾಲ ಪ್ರಾಚಾರ್ಯರಾಗಿ ಉತ್ತಮಸೇವೆ ಸಲ್ಲಿಸಿದ್ದಾರೆ. ಕನಿಷ್ಟ ಆರು ತಿಂಗಳಾದರೂ ಇವರಿಗೆ ಅವಕಾಶ ವಿರಬೇಕಿತ್ತು. ಆದ್ಯಾಗೂ ಯಶಸ್ವಿ ಕಾಲೇಜ್ ಡೇ, ಪರೀಕ್ಷಾ ಕಾರ್ಯ ಸುಸೂತ್ರವಾಗಿ ನಡೆಯಲು ಕಾರಣರಾಗಿದ್ದಾರೆ ಎಂದರು.
ಸಿರುಗುಪ್ಪ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.
ಕೊಟ್ರಪ್ಪ ಅವರು, ಕಲ್ಮಶವಿಲ್ಲದ ಮನಸಿನ ಡಾ.ಸೋಮನಾಥ ಅವರು ಇತಿಹಾಸ ವಿಭಾಗದ ಅಭಿವೃದ್ಧಿಗೆ ದುಡಿದಿದ್ದಾರೆ. ನಂಬಿದ ಸಹೋದ್ಯೋಗಿಗಳ ಕಷ್ಟಗಳಿಗೆ ನೆರವಾಗಿದ್ದಾರೆ ಎಂದು ಗುಣಗಾನ ಮಾಡಿದರು.
ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಂಪನಗೌಡ, ನೇರ ದಿಟ್ಟ ಮನಸಿನ ಡಾ.ಸೋಮನಾಥ್ ಕಾಲೇಜಿನ ಶಿಸ್ತಿನ ಪ್ರಾಧ್ಯಾಪಕರಲ್ಲಿ ಒಬ್ಬರು. ರೈತಾಪಿ ಕುಟುಂಬದಿಂದ ಬಂದಿರುವ ಇವರಿಗೆ ಹಿಂದೆಮುಂದೆ ಮಾತನಾಡುವ ಗುಣವಿಲ್ಲ. ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಶ್ರಮಿಸಿದ್ದಾರೆ ಎಂದು ಕೊಂಡಾಡಿದರು.
ಬಳ್ಳಾರಿ ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಟಿ. ದುರುಗಪ್ಪ ಅವರು ಮಾತನಾಡಿ, ಮೂರೂವರೆ ದಶಕಗಳ ಇತಿಹಾಸವಿರುವ ಸರಳಾದೇವಿ ಕಾಲೇಜಿನ ತಳ, ಶೋಷಿತ ಸಮುದಾಯದ ಪ್ರಪ್ರಥಮ ಪ್ರಾಚಾರ್ಯರೆಂಬ ದಾಖಲೆಯನ್ನು ಡಾ.ಸೋಮನಾಥ್ ಅವರು ನಿರ್ಮಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ನಗರ ಶಾಸಕ ನಾರಾ ಭರತರೆಡ್ಡಿ ಅವರ ಸಹಕಾರದೊಂದಿಗೆ ಎರಡು ತಿಂಗಳು ಕಾಲ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರಿಗೆ ನಮ್ಮ ಸಂಘವೂ ಸಂಪೂರ್ಣ ಬೆಂಬಲ ನೀಡಿತ್ತು ಎಂದು ಹೇಳಿದರು.
ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ.ಮಂಜುನಾಥ್ ಹೊಸಪೇಟೆ ವಿಜಯನಗರ ಕಾಲೇಜಿನಲ್ಲಿ ಓದುತ್ತಿದ್ದಾಗ ಡಾ.ಸೋಮನಾಥ್ ಅವರೊಂದಿಗೆ ಮೂರು ವರ್ಷ ಬಿಸಿಎಂ ಹಾಸ್ಟೆಲ್ ಮೆಟ್ ಆಗಿದ್ದ ನಲವತ್ತು ವರ್ಷಗಳ ಹಿಂದಿನ ಒಡನಾಟ, ಸವಿನೆನಪುಗಳನ್ನು ನೆನೆದರು.
ಅಭಿನಂದಿತ ಡಾ. ಸೋಮನಾಥ ಅವರು ಮಾತನಾಡಿ, ದೇಶದ ಭವ್ಯ ಪ್ರಜೆಗಳಾಗಲು ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ. ಈ ನಿಟ್ಟಿನಲ್ಲಿ 31 ವರ್ಷಗಳಕಾಲ ಉಪನ್ಯಾಸಕ, ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಶ್ರಮಿಸಿದ್ದೇನೆ. ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನದ ಹುದ್ದೆಗಳನ್ನು ಹೊಂದಿ ನಮ್ಮ ಮುಂದೆ ಬಂದು ನಾನು ನಿಮ್ಮ ಪಾಠ ಕೇಳಿದ್ದೇನೆ ಎಂದು ಹೇಳಿದರೆ ಆಗುವ ಆನಂದ ಹೇಳತೀರದು ಎಂದು ಭಾವುಕರಾದರು. ಮುಂದಿನ ದಿನಗಳಲ್ಲಿ ಸಮಾಜಸೇವೆ ಮಾಡುವ ಆಸೆಯಿದ್ದು ಕಾಲೇಜಿನ ಪ್ರಗತಿಗೂ ನಿರಂತರವಾಗಿ ದುಡಿಯುತ್ತೇನೆ ಎಂದು ಹೇಳಿದರು.
ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ಅಮರೇಗೌಡ, ವಾಣಿಜ್ಯ ವಿಭಾಗದ ಡಾ. ಗುರುಬಸಪ್ಪ, ಕುಟುಂಬದವರ ಪರವಾಗಿ ಡಾ.ಸೋಮನಾಥ್‌ಅವರ ಸಹೋದರ ಪೊಲೀಸ್ ಇಲಾಖೆಯ ಸುರೇಶ್ ಮತ್ತಿತರರು ಮಾತನಾಡಿದರು. ಆಹಾರ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಹೊನ್ನಮ್ಮ ಸೋಮನಾಥ್,
ಕಾಲೇಜಿನ ಅಧೀಕ್ಷಕ ಯುವರಾಜ ನಾಯ್ಕ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.
ಅಭಿನಂದನೆ: ಆದ್ಯಾಪಕರ ಸಂಘ, ನಗರದ ವಿವಿಧ ಸಂಘಗಳ ಪದಾಧಿಕಾರಿಗಳು, ಕುಟುಂಬದ ಸದಸ್ಯರು ಡಾ.ಸೋಮನಾಥ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು, ಭೋದಕ, ಭೋಧಕರೇತರಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ.ಎಸ್. ಮಂಜುನಾಥ್ ಸ್ವಾಗತಿಸಿ ನಿರೂಪಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಸಮೀಉಲ್ಲಾ ವಂದಿಸಿದರು.
*****