ನೀನೇ ಮೊದಲು ನೀನೇ ಕೊನೆ
ನೀನೇ ಮೊದಲು ನೀನೇ ಕೊನೆ;
ಮತ್ತೊಂದ ಬಯಸದು ನನ್ನ ಮನಸೇ!
ನೀನೇ ಗುರಿಯು ನೀನೇ ದಾರಿ;
ಇನ್ನೊಂದ ಅರಿಯದು ನನ್ನ ಉಸಿರೇ!
ಮೊದಲ ನೋಟ ಮೊದಲ ಭೇಟಿ;
ಮರೆಯಲಾರೆ ನಿನ್ನೆಜ್ಜೆ ಹಿಂಬಾಲಿಸುವೆ!
ಮೊದಲ ಮಾತು ಮೊದಲ ಭಾಷೆ;
ತಪ್ಪದೇ ನಿನ್ನ ಬೆರಳ ಹಿಡಿದು ಬರುವೆ!
ಏನೆ ಹೇಳು ಏನೆ ಕೇಳು ಒಲವೆ;
ಇಲ್ಲವೆನ್ನದೆ ನನ್ನೆ ನಿನಗೆ ಅರ್ಪಿಸಿರುವೆ!
ಏನೆ ಆಗಲಿ ಏನೆ ಹೋಗಲಿ ನಲ್ಲೆ;
ನಿನ್ನ ಆರಾಧನೆಯಲ್ಲಿ ನಲಿಯುತ್ತಿರುವೆ!
ನೀ ಕ್ಷಣ ದೂರಾದರು ಎದೆಭಾರ;
ತಾಳದ ತಲ್ಲಣ ದೇಹಕ್ಕೆ ಸಾವ ಕಂಪನ!
ನೀ ಸನಿಹವಿರಲು ಜೇನ ಮಧುರ;
ಸ್ವರ್ಗದ ಸವಿ ಅನುರಾಗ ಹೂ ಸಿಂಚನ!
ಇಲ್ಲಿ ಬಾಳಿಗೊಂದು ಕೊನೆಯಿದೆ;
ನನ್ನಾತ್ಮ ಚಿತ್ತದಿ ನೀ ಅಳಿಯದೆ ಉಳಿವೆ!
ನಮ್ಮ ಪ್ರೀತಿ ಮರೆಯದು ಜಗವೆ;
ಸಾವಿರದ ಪದಗಳಲ್ಲಿ ನಿನ್ನನ್ನೆ ಹಾಡುವೆ!
-ಟಿ.ಪಿ.ಉಮೇಶ್ ಹೊಳಲ್ಕೆರೆ