ಹೃದಯಾಘಾತದಿಂದ ಬೀದರಿನ ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಸಾವು


ಬೀದರ್, ಜು.10: ಹೃದಯಾಘಾತದಿಂದ ಜಿಲ್ಲೆಯ ‌ಬಸವಕಲ್ಯಾಣ ತಾಲೂಕಿನ ಹುಲಸೂರ ಸರ್ಕಾರಿ ಪ್ರಥಮ‌ದರ್ಜೆ ಕಾಲೇಜಿನ  ಅತಿಥಿ ಉಪನ್ಯಾಸಕ ಡಾ. ರವಿಕುಮಾರ್ ಅವರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ಮಹಾವಿಧ್ಯಾಲಯಕ್ಕೆ ಹೋಗುವ ಮಾರ್ಗದಲ್ಲಿ ಹೃದಯಘಾತವಾಗಿ ನಿಧನ ಹೊಂದಿದ್ದಾರೆ.      ಮೃತರು ಪತ್ನಿ, ಪುತ್ರ, ಪೋಷಕರು ಸೇರಿದಂತೆ ಅಪಾರ ಬಂಧು‌-ಮಿತ್ರರನ್ನು ಅಗಲಿದ್ದಾರೆ.

ಮೂಲತಃ ಕಲಬುರಗಿ ಜಿಲ್ಲೆಯ ಗಡಿಕೇಶ್ವರ ಗ್ರಾಮದ ಡಾ.ರವಿಕುಮಾರ್ ಅವರು ಸಹೋೋದ್ಯೋಗಿಯೊಬ್ಬರಿಗೆ‌ ಕರೆ ಮಾಡಿ ಇಂದು ಪರೀಕ್ಷಾ ಕರ್ತವ್ಯವಿದೆ. ಕಾಲೇಜಿಗೆ‌ ಬರ್ತಾ ಇದ್ದೇನೆ. ಆದರೆ ಸೊಂಟ ಮತ್ತು ಎದೆ ನೋಯುತ್ತಿದೆ ಎಂದು ತಿಳಿಸಿದ್ದಾರೆ. ತಕ್ಷಣ ನೀವು ಕಾಲೇಜಿಗೆ ಬರುುವುದು ಬೇಡ ಯಾರಾದರೂ ನಿಮ್ಮ ಕರ್ತವ್ಯವನ್ನು ಮಾಡುತ್ತೇವೆ. ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಷ್ಟರಲ್ಲಿ‌ ಸಾವು‌ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

6 ವರ್ಷಗಳಿಂದ  ಕನ್ನಡ ವಿಭಾಗದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ರವಿಕುಮಾರ್, ಪಿಎಚ್ ಡಿ, ನೆಟ್,   ಸ್ಲೆಟ್ ಪದವಿ ಪಡೆದಿದ್ದರೂ   ತಾರತಮ್ಯವಿಲ್ಲದೇ ಎಲ್ಲಾ ಅತಿಥಿ‌ ಉಪನ್ಯಾಸಕರಿಗೆ ಸೇವಾ ಭದ್ರತೆ ಲಭಿಸಿಬೇಕು ಎಂದು ಬಯಸುತ್ತಿದ್ದರು ಎಂದು ಆಪ್ತರು ತಿಳಿಸಿದ್ದಾರೆ.                                      ರಾಜಧಾನಿ‌ ಬೆಂಗಳೂರಿನಲ್ಲಿ ಬೃಹತ್ ಹೋರಾಟ‌ ಹಮ್ಮಿಕೊಂಡು ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿಬೇಕು, 2024-25ರಲ್ಲಿ  ಸೇವೆ ಸಲ್ಲಿಸಿದ ಎಲ್ಲರನ್ನೂ ಮುಂದುವರೆಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುತ್ತಿರುವ ಸಂದರ್ಭದಲ್ಲಿ ಡಾ. ರವಿಕುಮಾರ್ ಅವರ ಅಕಾಲಿಕ‌ ನಿಧನ  ಅತಿಥಿ ಉಪನ್ಯಾಸಕರ ಬಳಗದಲ್ಲಿ ಶೋಕವನ್ನುಂಟು ಮಾಡಿದೆ.                             ಸಂತಾಪ: ಡಾ. ರವಿಕುಮಾರ್ ಅವರ ಅಕಾಲಿಕ‌ ನಿಧನಕ್ಕೆ ರಾಜ್ಯ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘ ಸಂತಾಪ ಸೂಚಿಸಿದೆ.

—–