ಅನುದಿನ ಕವನ-೧೬೫೩, ಕವಿ:ಎ.ಎನ್.ರಮೇಶ್.ಗುಬ್ಬಿ.,

ಇಲ್ಲಿವೆ ವಿಕ್ಷಿಪ್ತ ವ್ಯಕ್ತಿತ್ವಗಳ ಅನಾವರಣದ ಹತ್ತು ಹನಿಗಳು. ನಾವೆಲ್ಲರೂ ನಿತ್ಯವೂ ನಮ್ಮ ಸುತ್ತ ಕಾಣುವ ವಿಕೃತ ಮನಸ್ಥಿತಿಗಳ ರಿಂಗಣಗಳ ಸುಪ್ತ ದನಿಗಳು. ಇಲ್ಲಿನ ಪ್ರತಿಹನಿ ಹನಿಯಲ್ಲೂ ನಮ್ಮ ನಿಮ್ಮದೇ ಸ್ವಾನುಭವ, ಲೋಕಾನುಭಾವಗಳ ಸಾರವಿದೆ. ಇತರರ ಕಾಲೆಳೆಯುವುದರಲ್ಲಿ, ಕುಹಕವಾಡುವುದರಲ್ಲಿ, ಅದರಿಂದಲೆ ಹೆಸರಾಗುತ್ತೀವೆಂಬ ಭ್ರಮೆಯಲ್ಲಿರುವ ರೋಗಗ್ರಸ್ಥ ಮನಸುಗಳ ವಿವರ ವಿಚಾರವಿದೆ. ಇಂತಹವರು ಎಂದಿಗೂ ತಾವು ಸ್ವಾಸ್ಥ್ಯದಿಂದಿರುವುದಿಲ್ಲ. ತಮ್ಮ ಸುತ್ತಲ ಸ್ವಾಸ್ಥ್ಯವನ್ನೂ ಸಹಿಸುವುದಿಲ್ಲ. ಏನಂತೀರಾ..?”

-ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.

ಹುಚ್ಚು-ಕಿಚ್ಚಿನ ಹನಿಗಳು..

1. ಮರ್ಮ.!

ನೀವು ಬೊಬ್ಬಿರಿದು ತೆಗಳಿದಷ್ಟೂ..
ಜನ ಸುಮ್ಮನಿದ್ದಾರೆಂದು ಬೀಗಬೇಡಿ
ನಾಯಿ ಹುಚ್ಚಾಗಿ ಬೊಗಳಿದಾಗಲೂ
ಸುಮ್ಮನಿರುವುದು ಜಗದ ರೂಢಿ.!

2. ದಿವಾಳಿ.!

ನಾಚಿಕೆ ಮಾನ ಮರ್ಯಾದೆ
ಬಿಟ್ಟು ನಿಂತ ಮೇಲೆ ಏನಿದೆ?
ಕೇಳಿ ಲೋಕಕೂ ಇರದಿಲ್ಲಿ..
ನಿಮ್ಮನು ತಡೆಯುವ ಇರಾದೆ.!

3. ಜೋಕೆ.!

ಬೆಂಕಿ ಹಚ್ಚಿಕೊಂಡು ಧಗಧಗಿಸಿದರೆ
ಆಗುವುದಿಲ್ಲವೆಂದು ಬೆಳಕಿಗೆ ನಾಂದಿ
ಬರೀ ಉರಿದುರಿದು ಆಗುತ್ತೀರಿ ಬೂದಿ.!

4. ವಿಕ್ಷಿಪ್ತರು.!

ಎಲ್ಲವ ಬಿಟ್ಟು ಬೆತ್ತಲಾದವರಿಗೆ
ಕರಗತ ಅವರಿವರ ಹಳಿವ ಕಲೆ
ಒಳಗೆ ಕಿಚ್ಚಿಂದ ಕತ್ತಲಾದವರಿಗೆ
ಇರದು ನೀತಿ ಸಂಯಮದ ನೆಲೆ.!

5. ಮದ್ದು.!

ಪ್ರಚಾರ ಹೆಸರಿನ ಹುಚ್ಚುಗಳಿಗೆ
ಭ್ರಮೆ ಭ್ರಾಂತುಗಳ ಕಿಚ್ಚುಗಳಿಗೆ
ಒಡಲಿಗಿಟ್ಟುಕೊಂಡ ಕಾಳ್ಗಿಚ್ಚಿಗೆ
ನಿರ್ಲಕ್ಷ್ಯವೇ ಸೂಕ್ತ ಮುಲಾಮು
ಸ್ವಯಂ ನಶಿಸುತ್ತಾರೆ ಮಾಮು.!

6. ಕೃತಿ.!

ಕಲ್ಲೆಸೆದು ಖುಷಿಪಡುವುದು
ಲೋಕದ ನಿಕೃಷ್ಟರ ವಿಕೃತಿ
ಕಲ್ಲುಗಳ ಮೆಟ್ಟಲಾಗಿಸುತ್ತಾ
ಬೆಳೆವುದು ಶ್ರೇಷ್ಠರ ಪ್ರಕೃತಿ.!

7. ಜಗಧರ್ಮ.!

ಹುಚ್ಚು ನಾಯಿಗಳಿಗಷ್ಟೇ ಅಲ್ಲ
ಜನ ಕೊಚ್ಚೆಗೂ ಕಲ್ಲೆಸೆವುದಿಲ್ಲ
ದುರ್ವ್ಯಸನಿ ದುರ್ವಾಸನಿಗಳನೆಲ್ಲ
ದೂರವಿಡುತ್ತಾರೆ ತಿಳಿದವರೆಲ್ಲ.!

8. ಚಿರಸತ್ಯ.!

ಬೆಂಕಿ ತಿಂದು ಬದುಕುತ್ತೇನೆಂದು
ಬಂದ ಯಾವೊಂದೂ ಪತಂಗ
ದೀಪವಾಗಿ ಬೆಳಗಲಿಲ್ಲ ಈ ಜಗ.!

9. ಪರಿಪಾಟಲು.!

ಬರೀ ಸುದ್ದಿಗಾಗಿ ಸದ್ದು ಮಾಡಿದರೆ
ಜಗದೆದುರು ಸ್ವಯಂ ನಗೆಪಾಟಲು
ಮಳೆ ಸುರಿಸದೆ ವೃಥಾ ಗುಡುಗಿದರೆ
ಜನ ಕಣ್ಣೆತ್ತಿಯೂ ನೋಡರು ಮುಗಿಲು.!

10. ತಮಸ್ಸು.!

ಇತರರ ತೇಜೋವಧೆಯಲ್ಲೆ
ಬೆಳಗುದು ನಮ್ಮ ವರ್ಚಸ್ಸು
ರವಿಯ ಮುಚ್ಚಿದ ಮೋಡ
ಪಡೆಯದು ದೀರ್ಘ ಆಯಸ್ಸು
ಸ್ಫುರಿಸಲಿಲ್ಲ ಎಂದು ತೇಜಸ್ಸು.!


-ಎ.ಎನ್.ರಮೇಶ್.ಗುಬ್ಬಿ.