ಮರ ಗಿಡಗಳಲ್ಲಿ
ಅದೆಷ್ಟು ಎಲೆ
ನಿನ್ನದಾದರೆ ಕತೆ
ನನ್ನದಾದರೆ ಕವಿತೆ
ಲೋಕದ್ದಾದರೆ
ನಡುವೆ ಗೀಚಿದ ರೇಖೆ
ಒಳಗಿನ ಚಿತ್ರದ
ಬಣ್ಣ ಕಣ್ಣೀರು
ಕಣ್ಣೀರ ಒಳಗೆ
ಆ ಕೊನೆಯ ಗಳಿಗೆ
ತುಂಬಿ ತುಂಬಿ
ದುಃಖ ಕುಡಿಯುವಾಗ
ಹೆಜ್ಜೆ ಗುರುತೆಲ್ಲ
ನೆನಪ ಹಾಡು
ಬೊಗಸೆ ತುಂಬ
ಆಕಾಶದಲ್ಲಿ
ಅಂಗೈ ಅಗಲ
ಭೂಮಿಯಲ್ಲಿ
ನಿಂದ ನಿಲುವೇ
ನಿಲುವುಗನ್ನಡಿ
ಕನ್ನಡಿಯ ತುಂಬ
ಅದೇ ಅದೇ
ಕನಸ ಮುಚ್ಚಿದ
ಬೆಳಕ ಬಾವಲಿ
ಅದು
ತಲೆಕೆಳಗಾಗಿ
ನಿದ್ರಿಸುವ ಕತ್ತಲೆ
ನಿದ್ರೆಯೆಂಬುದು
ತಾವಿನ ಮಡಿಲ ಕೂಸು
ಎಚ್ಚರವೆಂಬುದು
ಇರುವಿನ ಕಣ್ಣಾಮುಚ್ಚಾಲೆ
-ವಿಶಾಲ್ ಮ್ಯಾಸರ್, ಹೊಸಪೇಟೆ