ಪಯಣಿಗ
ಕೂಳಿಗಾಗಿ,ಕೂಲಿಗಾಗಿ
ನಗರದೊಳಗೇ… ಬದುಕಬೇಕೆಂದ
ತಾಯಿ ಮಾತ ಕೇಳಲಾರದೆ
ಹೊರಟು ಹೋದ ಪಯಣಿಗನ
ಮೂರು ದಿನಗಳು !
ದಿಕ್ಕು ತಿಳಿಯದ
ಸಮುದ್ರದ ನಡು ನೌಕೆಯ ಹಾಗೆ
ಸಂಚರಿಸುತ್ತ,ಸಂಚಲಿಸುತ್ತ
ಆತಂಕ ಪಡುತ್ತ, ದೀನನಾಗುತ್ತ
ಅಲೆಯುತಿದ್ದರೆ-
ಕಠಿಣ,ಕಠಿಣ,ತೀವ್ರ ತೀವ್ರಗಳ
ಜ್ವರ ದಹಿಸಿ,
ಭಯವೇರಿ
ಪ್ರಲಾಪಿಸಿ
ಮಬ್ಬು ಹಿಡಿದು,ಗಾಳಿ ಬಡಿದು
ಮಳೆ ಹೊಯ್ದು, ನೆರೆ ಬಂದು
ಕಡು ಕತ್ತಲು ತಬ್ಬಿಕೊಂಡು
ದಾರಿ ತಪ್ಪಿದ ಪಯಣಿಗನಿಗೆ
ಎಷ್ಟು ಕಷ್ಟ!
ಕಣ್ಣ ಬಾಗಿಲ ತೆರೆದು ನೋಡುವ
ಹಳ್ಳಿ ಮಣ್ಣಿನ ತಾಯಿ
ಏನ ನುಡಿವಳೋ..!?
ಚಿಂತೆಯಲ್ಲೇ…
ಉರಿವ ಕಂಗಳು
ಗುಂಡು ಸೂಜಿಯ ಚುಚ್ಚಿದಂತೆಯೇ
ತಲೆಯ ನೋವು!
ಕಪ್ಪು ಕಲ್ಲ ರಾತ್ರಿ
ಗುಂಡಿಗೆ ಮೇಲೆ,
ತಾಯಿ ಕಣ್ಣು
ಹೆಜ್ಜೆ ಹಾಕಲು
ಕಿವಿಗೆ ತಾಗದ ಕರೆಗಳಾವೋ
ಅರಿತುಕೊಂಡೂ,ಕೂಡಿಕೊಂಡೂ-
ಕುಸಿದು ಹೋಗಿ
ಪರಿತಪಿಸುವ ಪಯಣಿಗನಿಗೆ
ಎಷ್ಟು ಕಷ್ಟ!
ಕುರುಡು ಗೂಬೆಗಳು
ಸುರಿವ ಮಳೆಯೊಳಗೆ
ಒಂದು ಮಿಂಚು
ಕೋಳಿ ಕೂಗಿದೆ, ಚುಕ್ಕಿ ಅಣಕಿಸಿದೆ
ಪಯಣಿಗನ ಶವದೊಂದಿಗೆ
ಶೀತಗಾಳಿಯ ಸುದ್ಧಿಯಲ್ಲಿ
ತಾಯಿಗಾವುದೋ
ಕೆಟ್ಟ ಕನಸು
ಕರುಳು ಕದಲಿದೆ!
ತೆಲುಗು ಮೂಲ : ಮಹಾಕವಿ ಶ್ರೀ ಶ್ರೀ
ಕನ್ನಡಕ್ಕೆ : ಡಾ.ಶಿವಕುಮಾರ್ ಕಂಪ್ಲಿ, ದಾವಣಗೆರೆ