ಕ್ಷಮಿಸಿ ನಮ್ಮದು ಒಂದೇ ಬೇಡಿಕೆ
ಕೇರಿಯೊಂದರ ನಡುವಿನ ಮರದಲ್ಲಿ
ಎಂದಿಗೂ ಸೂರ್ಯನ ಬೆಳಕು ಕಾಣದ
ಸಮಾನವಿಲ್ಲದ ಸಾವಿರಾರು ಎಲೆಗಳು,
ಕತ್ತಲಲ್ಲೇ ಅವಿತು ಕೂತ ಕೊಂಬೆಗಳು,
ಎಲ್ಲದರ ಅನುದಿನದ ಕೋರಿಕೆ ಒಂದೇ-
ಬೆಳಕಿನೊಳಗೊಂದು ಸಮ ಬೆಳಕು ಮಾತ್ರ!
ಬಾಡಿದ ಎಲೆಗಳಿಗೋ ನೆಲಕಚ್ಚುವ ಮುನ್ನ,
ಚಿಗುರಿ ಮರವನ್ನೊಮ್ಮೆ ತಬ್ಬಿ ನಿಲ್ಲುವಾಸೆ.
ಹಕ್ಕಿಯ ಹಾಡಿಗೆ ತಲೆದೂಗುವ ಮುನ್ನವೆ-
ಅದರ ಕೊಕ್ಕಿಗೆ ಸಿಕ್ಕಿ ನಲುಗಿದ ಎಲೆಗಳ
ಕಣ್ಣಿನಲ್ಲೂ, ಹಸುಳೆಯ ನಗುವ ಕಾಣುವಾಸೆ.
ಹಸಿದೆಲೆಗಳ ಕೂಳು ಟೊಂಗೆಯ ಕೈಸೇರುವ
ಮುನ್ನವೇ – ಮರ ಕಾಲವನ್ನು ಎಣಿಸದೆ
ತೂಕ ತೂಗುವುದ ಕಲಿಯಬೇಕಾಗಿದೆ !
ಇಲ್ಲಿ ಮೀಸಲಿಡುವಿಡುವುದೂ-
ಒಂದು ರೀತಿ ಹರಿದೆಲೆಗಳ ಗಾಯಗಳ
ಮುಂದೆ ಮುಲಾಮಿನ ಕನ್ನಡಿ ಹಿಡಿದಂತೆ.
-ಸಂಘಮಿತ್ರೆ ನಾಗರಘಟ್ಟ