ನಾನು ಮಲ್ಲಿಗೆ
ಮನೆಯ ಹಿತ್ತಲಲ್ಲಿ ಹೂತು ಹಾಕುತ್ತಾರೆ
ಬೆಂಬಲಕ್ಕೆ ಗೂಟ ಜಡಿದು
ಬೆಳೆಯಲು ಬಿಡುತ್ತಾರೆ
ಬೆಳೆದರೆ ಕತ್ತರಿಸುತ್ತಾರೆ
ಕತ್ತರಿಸಿ ಮತ್ತೆ ಬೆಳೆಯಲು ಬಿಡುತ್ತಾರೆ
ಮೈಯಲ್ಲ ಮೊಗ್ಗಾಗಲಿ ಎನ್ನುತ್ತಾರೆ
ಅರಳಿ ಉದುರಿದರೆ
ಕಸವೆಂದು ಮುಖ ಸಿಡಿಸಿಕೊಳ್ಳುತ್ತಾರೆ
ಒಮ್ಮೊಮ್ಮೆ ಅರಳುವ ಮೊದಲೆ
ಕಿತ್ತು ಕುತ್ತಿಗೆಗೆ ದಾರ ಬಿಗಿಯುತ್ತಾರೆ
ಹೃದಯ ತೆರೆದು ಅರಳಲು ಮನಸಾಗದು ಆಗ
ಮನೆಯೊಳಗಿನ ಪೂರಿಗೆ
ನನ್ನ ಚೆಲುವಿನ ಗಂಧ ಗಾಳಿ ತಿಳಿದಿಲ್ಲ
ಅವಳಿಗೆ ಪ್ವಾರಿನ್ ಪೌಡರ್, ಸೆಂಟಿನ ಮೋಹ
ದೇವರ ಮೊರೆ ಹೊತ್ತು ಹೋಗುತ್ತಾರೆ
ಪಾದಕಿಟ್ಟು ಅವರ ಪಾಪ ಕಳೆದುಕ್ಕೊಳ್ಳುತ್ತಾರೆ
ಇನ್ನೊಂದು ಪೂಜೆಗೆ ಕಸದ ಬುಟ್ಟಿಗೆ ಸೇರುತ್ತೇನೆ
ನಾ ಮಾಡಿದ ಪಾಪವಾದರು ಏನೆಂದು ಕೇಳಿದರೆ
ದೇವರು ಗುಡಿಯೊಳಗೆ ಮೌನ
ಇವೆಲ್ಲದರ ನಡುವೆ ಮುದಿ ಜೀವವೊಂದು ನನ್ನ
ಮಗುವಂತೆ ಮಡಿಲಲಿ ತುಂಬಿ
ತನ್ನ ಒರಟು ಕೈಗಳಿಂದ
ಮೆದುವಾಗಿ ಮುತ್ತಿಡುತ್ತ ಪೋಣಿಸಿ
ನರೆ ಬಂದ ನೆತ್ತಿಗೆ ನಯವಾಗಿ ಸಿಕ್ಕಿಸಿಕೊಳ್ಳುತ್ತಾಳೆ
ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ
ಆಗೊಮ್ಮೆ ಮನ ಬಿಚ್ಚಿ ನಗುತ್ತೇನೆ
ಹಾಗೆ ಅಳುತ್ತೇನೆ
ದಿನಕ್ಕೊಮ್ಮೆ ಹುಟ್ಟಿಸಾಯುತ್ತೇನೆ
ನೋವಿನಲ್ಲೊ ನಲಿವಿನಲ್ಲೊ
ಅರಳುತ್ತಲೆ ಇರುತ್ತೇನೆ
ನಾನು ಮಲ್ಲಿಗೆ …
-✍️ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ ಜಿ.