ಅನುದಿನ ಕವನ-೧೭೦೬, ಹಿರಿಯ ಕವಿ: ಮುನಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಅವನು!?

ಅವನು.??!

ಅವನು ಹಾಗೇನೆ
ಪ್ರೀತಿ ವಿಶ್ವಾಸದ ಪ್ರತಿರೂಪ
ಸ್ವಲ್ಪ ಮುಂಗೋಪಿ
ಮನಸು ಹೂವಿನಂತೆ ಮೃದು
ಮಾತು ಕಡಿಮೆ ತಾನಾಯಿತು ತನ್ನಷ್ಟಕ್ಕೆ

ಮುನಿದು ಕ್ಷಣದಲ್ಲಿ ಕರಗುತ್ತಾನೆ
ಪ್ರಪಂಚಕ್ಕೆ ಕಾಣದಂತೆ ಏಕಾಂತದಿ
ಅವನು ಅಳುತ್ತಾನೆ
ಕಣ್ಣೀರ ಹನಿ ಹರಿದು
ಎಳೆಬಿಸಿಲು ಹೊನ್ನಕಿರಣ
ಹಸಿರು ನಗುವಂತೆ
ಮತ್ತದೆ ಮನವರಳಿಸುವ ನಗು

ಸುಂದರನೇನು ಅಲ್ಲ
ಹಾಗಂತ ತೆಗಳುವ ಹಾಗಿಲ್ಲ
ನಗುಮೊಗದವನು
ಯಾವ ಯಾರ ಮಾತಿಗು ಕಿವಿಗೊಡದೆ
ಯಾರನ್ನು ದ್ವೇಷಿಸದೆ ದೂರದೆ
ಏನನ್ನು ಬಯಸದೆ ಇದ್ದುಬಿಡುವನು

ಅವನ ಮೊಗವು ಸದಾ ಹೂವರಳಿದಂತೆ
ನೋವನ್ನೆಂದು ತೋರದವನು
ನಗುವನ್ನೆ ಹೊದ್ದಂತೆ
ಸದಾ ನಗುವಿನಲೆಗಳು ಸುತ್ತಲು
ಹೂಗಂಧ ಪಸರಿಸಿದಂತೆ
ಅವನಿದ್ದಲ್ಲಿ ಹರುಷ ಹರಡುವನು

ಅವನು ಜಗದ ನಿಯಮಕ್ಕೆ ಚಿಂತಿಸದೆ
ಸಂತೆಯಲಿದ್ದರು ಒಂಟಿಯಾದಂತೆ
ನಿಶ್ಯಬ್ದವು ಸ್ಥಬ್ಧವಾದಂತೆ
ಕುರುಡ ಹೆಳವಾ ಕಿವುಡನಾಗಿ
ತನ್ನಷ್ಟಕ್ಕೆ ತಾನಾಗಿ ಬದುಕುತ್ತಿದ್ದಾನೆ
ಅವನು..???
…. ಅವನು
…. ಅವನು.!!?

✍️ಮುನಿರಾಜ್ (ನಿಮ್ಮವನೆ..ರಾಜ್❣), ಬೆಂಗಳೂರು