ಅನುದಿನ ಕವನ-೧೭೦೮, ಕವಿ:ತರುಣ್ ಎಂ ಆಂತರ್ಯ, ಟಿ.ನಾಗೇನಹಳ್ಳಿ, ಚಿತ್ರದುರ್ಗ, ಕವನದ ಶೀರ್ಷಿಕೆ:ನೆತ್ತರ ಹಾದಿ ತಲುಪಿತೆ ಕವಿತೆ

ನೆತ್ತರ ಹಾದಿ ತಲುಪಿತೆ ಕವಿತೆ

ಚಿತ್ರ: ಜಬಿವುಲ್ಲಾ ಎಂ ಅಸದ್

ನನ್ನ ಕವಿತೆ ಈಗ ನೆತ್ತರ ಹಾದಿಯ ಕಡೆ ಹೊರಟಿದೆ ನೋಡಿ
ಸಮಾಜದಲ್ಲಿನ ಅನ್ಯಾಯಗಳ ಬಿಂಬಿಸಲು
ನ್ಯಾಯದ ಕನ್ನಡಿ ಹಿಡಿದು

ದುಡಿದು ತಿನ್ನುವ ಬಡವರು
ಬೇಡುವ ಭಿಕ್ಷುಕರಾಗಿರುವರು
ಯಾರದೋ ಭರವಸೆಗೆ ಕೈ ಚಾಚಿ ನಿಂತು
ಸಿಕ್ಕಿಲ್ಲ ಇನ್ನು ಬಡತನದ ಹಸಿವಿಗೆ ಮುಕ್ತಿ

ಮನುಷ್ಯ ಮನುಷ್ಯರಿಲ್ಲಿ ಕೊಂದು ಬದುಕುತ್ತಿದ್ದಾರೆ
ಪ್ರಪಂಚದಲ್ಲಿ ಪಾಪಿಗಳಿಗೂ
ರಾಜ ಮರ್ಯಾದೆ

ದೇವರೆಂಬ ಹೆಣ್ಣು
ಹಂಚಿ ತಿನ್ನುವ ಹಣ್ಣಾಗಿದ್ದಾಳೆ
ಭಾರತಮಾತೆಗಿಲ್ಲಿ
ಪ್ರತಿದಿನವೂ ನಿಲ್ಲದ ಶೋಷಣೆ

ಜಾತಿ ಧರ್ಮಗಳ ನಡುವೆ ಹತ್ತಿಕ್ಕಿ
ಬಲಿಯಾದ ಅದೆಷ್ಟೋ ಅಮಾಯಕರ ನೆತ್ತರಿನಲ್ಲಿ
ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡು
ದೇಶವಾಳುತಿದ್ದಾರೆ ,
ಕ್ಷಮಿಸಿ ದೇಶ ಹಾಳು ಮಾಡುತ್ತಿದ್ದಾರೆ

ನ್ಯಾಯ ದೇವತೆಯ ಕಣ್ಣು ಕಟ್ಟಿರುವರು
ತಪ್ಪು ಸರಿಗಳ ತೂಗುವ ತಕ್ಕಡಿಗೆ
ಕಂತೆ ಕಂತೆಯ ಗಾಂಧಿ ನೋಟು

ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ
ಇಲ್ಲಿ ನೆತ್ತರು ಹರಿಸುತ್ತಾರೆ
ನ್ಯಾಯದ ಕನ್ನಡಿಗೆ ಕಲ್ಲುತೂರಿ

-ತರುಣ್ ಎಂ ಆಂತರ್ಯ , ಟಿ. ನಾಗೇನಹಳ್ಳಿ, ಚಿತ್ರದುರ್ಗ ಜಿ.✍️
—–