ಶಿಕ್ಷಕರಾದ ನಮ್ಮ ಜೀವನ!
ದಿನದಿನವು ಶಾಲೆಯಲ್ಲಿ ಕಪ್ಪು ಹಲಗೆಯ ಮೇಲೆ;
ಬಣ್ಣಬಣ್ಣದ ಬಳಪಗಳಿಂದ ಜ್ಞಾನವನ್ನು ಬರೆದು;
ಸಾವಿರಾರು ವಿದ್ಯಾರ್ಥಿಗಳಿಗೆ ಅರಿವು ಧಾರೆಯೆರೆದು;
ಜೀವನವನ್ನು ಬೆಳಗಿಸುವೆವು!
ನಿತ್ಯವು ತರಗತಿಯ ಹಲಗೆಯಲ್ಲಿ ಬರೆಯುವಾಗ;
ನಮ್ಮ ಜೀವನನ್ನು ನೆನೆದರೆ ಅಚ್ಚರಿಯಾಗುವುದು!
ಯಾವಾಗ ಅಳಿಸುವುದೊ ನಮ್ಮ ಹಣೆಬರಹವೆಂದು?
ಅಷ್ಟರಲ್ಲಿಯೆ ಉಳಿಸುವೆವು ವಿದ್ಯಾರ್ಥಿಗಳ ಭವಿಷ್ಯ!
ಮಕ್ಕಳ ಏಳ್ಗೆಗೆ ಸಮಾಜ ಉನ್ನತಿಗೆ ನಮ್ಮ ಆಯುಷ್ಯ!
ಸಮಯ ಕಳೆಯುವುದು ದಿನವು ಇಲ್ಲವಾಗುವುದು;
ಮುಷ್ಟಿಯಲ್ಲಿಡಿದ ಮರಳು ಜಾರುವಂತೆಯೆ!
ಉರಿಯುವ ಸೂರ್ಯ ಮುಳುಗುವಂತೆಯೆ!
ಶಿಕ್ಷಣ ಶಿಲ್ಪಿಗಳು ನಾವು
ಬೆಳೆಯುವ ಸಿರಿಗೆ ಆಸರೆಯು ನಾವು!
ಸಾವಿರಾರು ಮಾನವ ಕಗ್ಗಲ್ಲುಗಳನ್ನು
ಸುಂದರ ಕಲಾಕೃತಿಗಳಾಗಿ ರೂಪಿಸುವೆವು!
ಶಿಲ್ಪಿಗಳ ಕಲ್ಲಿನ ಕಲಾಕೃತಿಗಳೆಗೆಲ್ಲ ಬೆಲೆಯಿದೆ;
ನಮ್ಮ ಅಗಣಿತ ಮಾನವ ವ್ಯಕ್ತಿತ್ವ ರೂಪಿಸುವಿಕೆಗೆ
ಅದೇ ಸಾಮಾನ್ಯ ಪಗಾರದ ಸಂಭಾವನೆಯಿದೆ!
ನುಸಿಹಿಡಿವ ಫಲಕ ಖರ್ಚಾಗದ ಶಾಲುಗಳ ಸನ್ಮಾನವಿದೆ!
ತುಕ್ಕಿಡಿವ ತಗಡಿನ ಶೀಲ್ಡು ಮುರಿವ ಗಾಜಿನ ಹೂದಾನಿ
ಬಾಡುವ ಹೂವಿನ ಹಾರಗಳ ಗೌರವವಿದೆ!
ತೃಪ್ತಿಕೊಡದ ಜೀವನ ಮಟ್ಟದ ನರಳಿಕೆಯಿದೆ!
ಸೇವಾವಧಿಯಲ್ಲಿ ಸಾವಿರಾರು ವ್ಯಕ್ತಿತ್ವಗಳಿಗೆ
ಸ್ಪೂರ್ತಿಯಾಗುವೆವು! ಮಾರ್ಗವಾಗುವೆವು!
ಗುರಿಯಾಗುವೆವು! ಸಾಧನೆಯಾಗುವೆವು!
ನಾವು ಮಾತ್ರ ನಿಂತಲ್ಲೇ ನಿಂತಿರುವೆವು!!
ರಸ್ತೆಯ ಮಗ್ಗುಲ ಕೈಮರದಂತೆ! ಮೈಲುಗಲ್ಲಿನಂತೆ!
ಮಕ್ಕಳ ಹಾದಿಯಲ್ಲಿನ ಮುಳ್ಳುಗಳ ತೆಗೆದುಹಾಕುವಾಗ
ನಮ್ಮ ಪಾದಗಳು ದೊಗರು ಬೀಳುತ್ತವೆ!
ನಮ್ಮ ಕೈಗಳು ರಕ್ತ ಸುರಿಸುತ್ತವೆ!
ನಮ್ಮ ಬಟ್ಟೆಗಳು ಹರಿದು ಹೋಗುತ್ತವೆ!
ಮಕ್ಕಳನ್ನು ಹೂವುಗಳಂತೆ ಸುರಕ್ಷಿತವಾಗಿ ಬೆಳೆಸುವಾಗ
ತೋಟದ ಮಾಲಿಯಂತೆ ಶ್ರಮವಾಗುತ್ತದೆ!
ಆಯಾಸ ನೋವು ದುಃಖ ಬಳಲಿಕೆಯಾಗುತ್ತದೆ!
ಮಕ್ಕಳ ಭವಿಷ್ಯಕ್ಕಾಗಿ ನಾವು ಎಲ್ಲರ ಬೈಗುಳ ಹಳಹಳಿಕೆ
ಕೀಳುನೋಟ ಅಪಹಾಸ್ಯ ಕಷ್ಟಗಳ ತಾಳಿಕೊಳ್ಳುವೆವು!
ದೇಶದ ಭವಿತವ್ಯಕ್ಕೆಂದು ಜೀವನ ಸವೆಸುವೆವು!
ಶಿಕ್ಷಕರು ನಾವು ದೀಪದಂತೆ
ಸುತ್ತಮುತ್ತಲ ಸಮಾಜದ ಮಕ್ಕಳ ಬಾಳು ಬೆಳಗಿಸಲು
ನಮ್ಮನ್ನು ನಾವು ಸುಟ್ಟುಕೊಳ್ಳುವೆವು!
ನಂಬಿದ ಮಕ್ಕಳ ಮನೆ ಬೆಳಗಿಸಲು ನಮ್ಮ ಮನೆಯು
ಕತ್ತಲಲ್ಲಿರುವುದನ್ನು ಮರೆಯುವೆವು!
ನಾವು ಕತ್ತಲಲ್ಲಿಯೇ ಉಳಿಯುವೆವು!
ಮಕ್ಕಳ ಭವಿಷ್ಯ ಬೆಳಗುವುದನ್ನು ಕಂಡು ಕತ್ತಲಲ್ಲೇ
ಕರಗುತ್ತ ಮುದುಡಿ ನಲಿಯುವೆವು!
ಜಗವ ಬೆಳಗೊ ದೀಪದ ಕೆಳಗೆ ಎಂದೆಂದು ಕತ್ತಲು!
ಜಗಕ್ಕೆ ಬೆಳಕು ಶಿಕ್ಷಕರ ಮನೆಯ ಒಳಗೆ ಕತ್ತಲು!
ಪ್ರಾಮಾಣಿಕತೆಯೊಂದೆ ಶಿಕ್ಷಕನ ಆಸ್ತಿ;
ಉಳಿದದ್ದೆಲ್ಲ ಕೇಳಲೇಬೇಡಿ ಜಾಸ್ತಿ!
ಯಾರ ಜೀವನವು ಕಷ್ಟದಲ್ಲಿ ಹಾದುಹೋಗುವುದೋ
ಅದು ಯಾವತ್ತು ಹಣತೆಯಂತೆ!
ಪ್ತಜ್ವಲಿಸೋ ಸೂರ್ಯನಂತೆ!
ಹೊರಗೆ ನೋಡುವವರಿಗೆ ಬಣ್ಣ;
ಪಡೆಯುವವರಿಗೆ ಬೆಳಕು!
ಒಳಗೆ ಮಾತ್ರ ನಿಗಿನಿಗಿ ಕುದಿ ಕೆಂಡ!
-ಟಿ.ಪಿ.ಉಮೇಶ್, ಹೊಳಲ್ಕೆರೆ
—–