ಚಿತ್ರಾಂಗದಾ
ನನ್ನನ್ನು ಸುಂದರಿಯೆಂದು ಕರೆಬೇಡ,
ಸೌಂದರ್ಯವೆಂಬ ಚೀಲದಲ್ಲಿ
ಹೆಣ್ಣಿನ ಆತ್ಮವನ್ನು ಹೊತ್ತೊಯ್ಯಲು
ಸಾಧ್ಯವಿಲ್ಲ.
ನನ್ನನ್ನು ಪತ್ನಿಯೆಂತಲೂ ಗುರುತಿಸಬೇಡ,
ಅದೇ ಹಣೆಪಟ್ಟಿ ನನ್ನ ಲಲಾಟದ ಮೇಲೆ
ಮುದ್ರಿಸಿದರೆ
ನನ್ನ ಬಾಹುಗಳ ಶಕ್ತಿಯನ್ನು
ಕಾಣದೆ ಹೋಗುತ್ತೀ.
ನಾನು ರಾಜಕುಮಾರಿ
ಆದರೆ ಅರಮನೆ ಗೋಡೆಗಳೊಳಗೆ
ಬಂಧಿತಳಾಗಿ ಬದುಕಲಿಲ್ಲ.
ನಾನು ಹೆಣ್ಣು,
ಆದರೆ ಹೆಣ್ಣಾಗಿರುವುದು
ನನ್ನ ದೌರ್ಬಲ್ಯವಲ್ಲ.
ಅರ್ಜುನ,
ನಿನ್ನ ಬಾಣಬಿರುಸಿಗೆ ಮಾರುಹೋಗಲಿಲ್ಲ,
ನಿನ್ನ ದೃಷ್ಟಿ ನನ್ನನ್ನು ಬಂಧಿಸಲಿಲ್ಲ.
ನನ್ನೊಳಗಿನ ದಿವ್ಯಾಗ್ನಿಯೇ ನಿನ್ನತ್ತ
ಸೆಳೆದರೂ
ನಾನು ನಿನ್ನ ನೆರಳಾಗುವುದಿಲ್ಲ.
ಎದುರಾಗು
ಅಲಂಕಾರದ ಹೂವಿನಂತೆ ಅಲ್ಲ
ಸರಿಸಮಾನ
ರಣಭಯಂಕರರಂತೆ
ಏಕೆಂದರೆ ನಾನು
ಚಿತ್ರಾಂಗದಾ
ಹೆಣ್ಣಿನ ಧಮನಿಗಳಲ್ಲಿ
ಹರಿಯುವ ಪ್ರತಿರೋಧದ ರಕ್ತ
ಪ್ರೀತಿಯೂ ಶಕ್ತಿಯೂ ಒಂದೇ ದೇಹದಲ್ಲಿ
ಸಂಗಮಿಸಿರುವ ಸತ್ಯ
-ಮಮತಾ ಅರಸೀಕೆರೆ
—–