ಅನುದಿನ ಕವನ-೧೭೩೨, ಕವಯಿತ್ರಿ: ಸಿರಿ, ಶಿವಮೊಗ್ಗ

ನೀನು ನೀನಾಗಿರುವುದಕ್ಕೆ
ನಾ ಮತ್ತಷ್ಟು ಒಲಿಯುತ್ತೇನ?
ಗೊತ್ತಿಲ್ಲ!

ನಡುರಾತ್ರಿಯಲ್ಲಿ ನಕ್ಷತ್ರಗಳ
ಕೂತು ನೋಡೋಣ
ಬಂದುಬಿಡು ಎನ್ನುತ್ತೀಯ
ಇಲ್ಲವೆಂದರೆ
ನಕ್ಕು ಸುಮ್ಮನಾಗುತ್ತೀಯ….

ನಿನ್ನ ಬಿಡುವಿಲ್ಲದ ಗಳಿಗೆಗಳಲ್ಲಿ
ನಿನ್ನ ಅಂಗಿ ಹಿಡಿದು
ಜಗ್ಗುತ್ತೇನೆ
ಮೂಕನಾಗುತ್ತೀಯ….

ನನ್ನ ಮಡಿಲಿಗಾಗೇ ಸದಾ
ಹಂಬಲಿಸಿ
ಬರುವ ಮಗು
ಅದೆಲ್ಲಿಗೆ ತಾನೇ ಹೋದಾಳು
ಎಂಬಂತೆ ಮತ್ತೆ ಕೈ ಚಾಚುತ್ತೀಯ…..

ಮಾತೇ ಇಲ್ಲದೆ
ಮಟ್ಟಸವಾಗಿ
ಬೆಳೆದು ನಿಂತಿರುವ
ಒಲವಿದು
ಹೌದು ಮೌನ
ನಮ್ಮಲ್ಲಿ ಬಹಳಷ್ಟು
ಮಾತಿಗಿಳಿಯುತ್ತವೆ
ಮತ್ತು ನಾನು ಇಂತದೊಂದು
ವಿಸ್ಮಯಕ್ಕೆ ಸದಾ ಚಕಿತಗೊಳ್ಳುತ್ತೇನೆ…..

ದೇಹವೇನೋ ಬೇಕೆನ್ನುತ್ತೀಯ
ಕೇವಲ ಕಣ್ಣುಗಳಿಗೆ ಮಾತ್ರ ಸೋತು
ಬಿಡುತ್ತೀಯ…..
ನಾನು ನಿನ್ನ ನೆರೆತ ಕೂದಲುಗಳನ್ನು
ನೋಡ ನೋಡುತ್ತಲೇ
ಮತ್ತಷ್ಟು ನಿನಗೇ ಒಲಿಯುತ್ತೇನೆ…..
ನಿನ್ನ ಮೈ ಬಣ್ಣಕ್ಕೆ ಸೋತು
ಸತ್ತೇಹೋಗುವಷ್ಟು
ನೀಲಿಯಾಗುತ್ತೇನೆ….

ಇವುನೇ
ಪ್ರೇಮಕ್ಕೆ ಪರಿಧಿಗಳೇಕೆ
ಪ್ರೇಮವೇ ಪರಿಪೂರ್ಣ.‌‌…

-ಸಿರಿ(ಶ್ರಿದೇವಿ ಭುಜಂಗಪ್ಪ), ಶಿವಮೊಗ್ಗ
—–