ಅನುದಿನ ಕವನ-೧೭೩೯, ಕವಿ: ಶಂಕರ್‌ ಎನ್ ಕೆಂಚನೂರು, ಕುಂದಾಪುರ

ಉಕ್ಕೇರುವ ಕಡಲು
ತನಗೆ ತಾನೇ ಶಾಂತವಾಗುತ್ತದೆ
ಯಾರ ಸಾಂತ್ವನವೂ ಇಲ್ಲದೆ

ನಾನು ನೀನು
ಇದೇ ಸಮುದ್ರದಿಂದ ಆವಿಯಾದ
ನೀರು ಕುಡಿದವರು
ಅದರ ಉಪ್ಪು ತಿಂದವರು
ಇವೆರಡೂ ಬೆರೆತಿರುವ ಗಾಳಿಯನ್ನು ಉಸಿರಾಡಿದವರು

ನಾವು ಕಡಲಿನಷ್ಟು
ಮಹತ್ತು ಉಳ್ಳವರು ಅಲ್ಲದಿರಬಹುದು
ಆದರೆ, ಇದೇ ಕಡಲಿನ ಭಾಗ
ನನ್ನೊಳಗೂ, ನಿನ್ನೊಳಗೂ ಇದೆ

ನಿನಗೆ ಸಾಂತ್ವನ ಬೇಕೆನ್ನಿಸಿದರೆ
ನನ್ನ ಬಳಿ ಬಾ
ನನಗೆ ಸಾಂತ್ವನ ಬೇಕೆನ್ನಿಸಿದರೆ
ನಿನ್ನ ಬಳಿಗೆ ಬರುವೆ

ನಾವಿಬ್ಬರೂ ಕಡಲು
ಏಕೆಂದರೆ ನಮ್ಮೊಳಗೆ ಇರುವುದೂ
ಈ ಕಡಲಿನ ಅಂಶ

ನೀನು ಬಂಗಾಳ ಕೊಲ್ಲಿಯಾದರೆ
ನಾನು ಅರಬ್ಬೀ ಕೊಲ್ಲಿ
ಇಷ್ಟೇ ನಮ್ಮಿಬ್ಬರ ನಡುವಿನ ವ್ಯತ್ಯಾಸ
ಉಳಿದಂತೆ
ನಾನು ನೀನು ಇಬ್ಬರೂ
ನೀರು, ಉಪ್ಪು, ಮತ್ತು ಗಾಳಿ

ಬತ್ತಿ ಹೋಗುವ ಮೊದಲು
ಒಂದಷ್ಟು ಉಕ್ಕುವ
ಒಂದಷ್ಟು ಸೊಕ್ಕುವ
ಮತ್ತೆ ತನ್ನಂತೆ ತಾನೆ ತಣ್ಣಗಾಗುವ
ಅದೇ ಕಡಲಿನಂತೆ

ಏಕೆಂದರೆ ನಾನೂ ಕಡಲು
ನೀನೂ ಕಡಲು

-ಶಂಕರ್ ಎನ್ ಕೆಂಚನೂರು, ಕುಂದಾಪುರ
—–