ನಾಡಿನ ಹೆಸರಾಂತ ಕತೆಗಾರ, ವಿಮರ್ಶಕ, ಕವಿ ಡಾ.ಮೊಗಳ್ಳಿ ಗಣೇಶ್ ಅವರ ಅಕಾಲಿಕ ನಿಧನದಿಂದ ಕನ್ನಡ ಸಾಹಿತ್ಯ ಬಡವಾದಂತೆ ಭಾಸವಾಗಿದೆ. ತಮ್ಮ ನೇರ, ನಿಷ್ಠುರ, ದಿಟ್ಟ ಬರಹಗಳಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಅರವತ್ತೆರಡು ಖಂಡಿತಾ ಸಾಯುವ ವಯಸಲ್ಲ. ಎಂಟತ್ತು ವರ್ಷ ನಮ್ಮೊಂದಿಗೆ ಇದ್ದಿದ್ದರೆ ಡಾ.ಮೊಗಳ್ಳಿ ಅವರು ತಮ್ಮ ಲೇಖನಿಯಿಂದ ಮತ್ತಷ್ಟು ಉತ್ಕೃಷ್ಟ ಸಾಹಿತ್ಯ ರಚಿಸುತ್ತಿದ್ದರು. ಎಂದಿನಂತೆ ವ್ಯವಸ್ಥೆ ವಿರುದ್ಧ ತಮ್ಮ ತಕರಾರು ಎತ್ತುತ್ತಿದ್ದರು.
ವೈಯಕ್ತಿಕವಾಗಿ ನನ್ನ ಜತೆ ಎರಡೂವರೆ ದಶಕಗಳಿಂದ ನಿಕಟವಾಗಿದ್ದ ಡಾ.ಮೊಗಳ್ಳಿ ಗಣೇಶ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಉತ್ತಮ ಬಾಂಧ್ಯವ್ಯ ಹೊಂದಿದ್ದರು. ಸದಾ ಬೆಂಬಲ ಮಾರ್ಗದರ್ಶನ ನೀಡುತ್ತಿದ್ದರು. ಡಾ.ಮೊಗಳ್ಳಿ ಅವರ ಕೊನೆಯ ‘ಎಲ್ಲವೂ ಸಾಧ್ಯ’ಕವಿತೆ ಪ್ರಕಟಿಸುವುದರ ಮೂಲಕ ಕಹಳೆ ಕಂಬನಿ ಮಿಡಿಯುತ್ತದೆ. ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ.
(ಸಂಪಾದಕರು)
ಡಾ.ಮೊಗಳ್ಳಿ ಅವರು ಬರೆದ ಕೊನೆಯ ಕವಿತೆ…..
ಎಲ್ಲವೂ ಸಾಧ್ಯ
ನಾನೊಂದು ಬಟಾಬಯಲ ಹುಲ್ಲುಗಾವಲಾಗಿದ್ದರೆ
ಎಷ್ಟೊಂದು ಪ್ರಾಣಿಗಳ ಅನ್ನದ ಆಲಯವಾಗುತ್ತಿದ್ದೆನೋ
ತರ ತರದ ಹೂ ಕಾಯಿ ಹಣ್ಣು ಬಳ್ಳಿಗಳ ಹೊಲವಾಗಿದ್ದರೆ ಎಷ್ಟೆಲ್ಲ ಚಿಟ್ಟೆಗಳು ಮುತ್ತಿಕ್ಕಿ
ಮತ್ತೆ ಋತುಗಾಲಕ್ಕೆ ಮುಟ್ಟಲು ಬರುತ್ತಿದ್ದವೊ
ಬೆಟ್ಟ ಸಾಲುಗಳಾಗಿದ್ದರೆ ನಿಸರ್ಗ ನನ್ನೊಡನೆ
ಏನೇನು ರಹಸ್ಯಗಳ ಕಲಿಸಿ ಹುಟ್ಟಿನ
ಮೇಲು ಕೀಳಿಲ್ಲದ ಸತ್ಯವ ಎಷ್ಟು ಉಣಿಸುತ್ತಿತ್ತೊ
ಬೆಟ್ಟದ ಹೆಬ್ಬಂಡೆ ಆಗಿ ಅದರಲ್ಲೊಂದು
ಮರವಾಗಿದ್ದಿದ್ದರೆ ಎಷ್ಟು ಜೀವಿಗಳು
ಗೂಡು ಕಟ್ಟುತ್ತಿದ್ದವೋ
ನನ್ನಂತವರು ಮನುಷ್ಯರಾಗಿ ಹುಟ್ಟಿ
ಏನೇನು ಮಾಡಿದೆವೋ ಯಾರ್ಯಾರು
ದಾರಿ ತಪ್ಪಿಸಿದರೋ ಹಳಿದೇನು ಫಲ…
ಅಮಾಯಕ ವೇಷಗಳಲ್ಲಿ
ಎಷ್ಟೊಂದು ಬರ್ಬರ ನಾಟಕ
ಬೆಳಕ ನುಂಗುವ ಕೂಪಗಳೆಲ್ಲ ನಮ್ಮವೇ
ಹಳ್ಳ ಹೊಳೆ ತೊರೆ ನದಿ
ಕಡಲೆಲ್ಲ ಬೇರೆ ಬೇರೆಯೇ
ಮಳೆಯ ನೀರಾಗುವ ಆಸೆ
ಆಗಲಾದರೂ ನಾನು ಎಲ್ಲರ ದಾಹಕ್ಕೆ ಪನ್ನೀರಾಗುವೆ.

ಡಾ. ಮೊಗಳ್ಳಿ ಗಣೇಶ್
—–
